havigannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
havigannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 19, 2009

random post - 081809

* ಇಲ್ಲಿ ಬೇಸಿಗೆ ಕಳೆದು ಹೋಗ್ತಾ ಇದ್ದು. ಸುಮಾರಷ್ಟು ಜಾಗ ನೋಡದು ಬಾಕಿ ಉಳದ್ದು, ಬೇಗ ಬೇಗ ನೋಡಕ್ಕು.
* ಅಕ್ಟೋಬರ್ ನಲ್ಲಿ ಭಾರತಕ್ಕೆ ಹೋಗಿ ಬರಕ್ಕು.
* ಆಗಸ್ಟ್ 09 ನೆ ತಾರೀಕು, ಬೇ ಏರಿಯ ಕನ್ನಡ ಬ್ಲಾಗ್ಗರ್ಸ್ ಮೀಟ್ ಇತ್ತು. ಸುಮಾರು ಜನ ಕನ್ನಡದಲ್ಲಿ ಬರಿಯೋರನ್ನೆಲ್ಲ ಬೇಟಿ ಮಾಡಿ ಖುಷಿ ಆತು.
* ಸ್ವಲ್ಪ ಕೆಲಸ ಕಡಮೆ ಇದ್ದು, ಅದೇ ಹೆಳೆಲಿ ಸುಮಾರು ಈಜು ಹೊಡಿಯದು, ಗರಡಿ ಮನೆ ಕಸರತ್ತು ಎಲ್ಲ ಮಾಡಕ್ಕೆ ಸಮಯ ಸಿಕ್ಕಿದ್ದು.
* ಮೊನ್ನಿತ್ಲಗೆ ಯೋಸೆಮಿತೆ ಗೆ ಹೋಗಿ "Half Dome" ಕಲ್ಲಿನ ಬಂಡೆ ಹತ್ತಿಳ್ದು ಬಂದಿ (ಎರಡನೇ ಸಲ)
* ಇಷ್ಟು ದಿನ ಆಡಿದ್ದಕ್ಕೆ ವಾಲಿಬಾಲ್ ಆಟ ಸ್ವಲ್ಪ ಚೆನಾಗೈದು.
* ಗೆಳೆಯ ಪ್ರಸಾದ್ ಮದ್ವೆ ಆಗ್ತ ಇದ್ದ, ಅದು ಇದು ಹೇಳಿ ನಂಗು ತಲೆ ಕೆಡಸಿ ನನ್ನೂ ಮದ್ವೆ ಮಾಡ್ಕ್ಯ, ವರ್ಷಾತು ಹೇಳಿ ನಂಬ್ಸಿದ್ದ.. ನೋಡಕ್ಕು ಎಂತ ಕತೆ ಹೇಳಿ.
* ಮುಂದಿನ ವರ್ಷದ ಬುಡದಲ್ಲಿ ವಾಪಸ್ ಹೊಂಟಿ ನಾನು ಭಾರತಕ್ಕೆ. (ಫುಲ್ ಟೈಮ್)
* MS (ನನ್ನ ಗೆಳೆಯ, ರೂಂಮೇಟ್) ಒಳ್ಳೆ ಅಡ್ಗೆ ಮಾಡ್ತ, ಅದಕ್ಕೆ ದಿನಾನು ಒಳ್ಳೆ ಊಟ :-)

ಸೋಮವಾರ, ಜೂನ್ 22, 2009

ಹವ್ಯಕ ಪಿಕ್ನಿಕ್

ಬೇ ಏರಿಯ ದಲ್ಲಿ ಸಿಕ್ಕಾಪಟ್ಟೆ ಭಾರತದವರು ಇದ್ದ, ಹಂಗೆ ಅದ್ರಲ್ಲಿ ಸುಮಾರು ಜನ ಕನ್ನಡದವರು. ಇದ್ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹವ್ಯಕ ಪಂಗಡದವ್ರೂ ಇದ್ನ್ಯ. ನಂಗಳದ್ದೆ ಒಂದು ಗುಂಪು ಬೇರೆ ಇದ್ದು. ಅದರಿಂದ ಸುಮಾರು ಹಬ್ಬನೆಲ್ಲ ಮಾಡ್ತ್ಯ, ಹಂಗೆ ವರ್ಷಕ್ಕೊಂದು ಬೇಸಿಗೆ ಪಿಕ್ನಿಕ್ ಬೇರೆ ಇರ್ತು. ಇವತ್ತು ಹಂಗೆ ಒಂದು ಪಿಕ್ನಿಕ್ ಇತ್ತು, ವಿಚಾರ ಎಂತಪ ಅಂದ್ರೆ, ನಾನು ಕಾರ್ಯಕ್ರಮ ನಿರ್ವಾಹಕರಲ್ಲಿ ಒಬ್ಬ ಆಗಿದಿದ್ದು :-)

ನನ್ ಮಟ್ಟಿಗೆ ಹೇಳಕ್ಕು ಅಂದ್ರೆ ಹವ್ಯಕ ಕಾರ್ಯಕ್ರಮಗಳಲ್ಲಿ ಅತಿ ಪ್ರಮುಖ ವಿಚಾರ 'ಊಟ'. ಹೌದು ಮತ್ತೆ, ಬ್ರಹ್ಮಚಾರಿ ಜೀವನದಲ್ಲಿ, ಅದೂ ನಮ್ಮೂರ ಬದಿ ಊಟಕ್ಕೆ ಸಿಕ್ಕಾಪಟ್ಟೆ ಪ್ರಾಮುಖ್ಯ. ಅದೂ ಬೇರೆ ಮೊನ್ನಿತ್ಲಗೆ ಊರಕಡೆ ಮದ್ವೆ ಮನೆ ಊಟ ನೆನ್ಸ್ಕ್ಯನ್ಡು, ಜಿಲೇಬಿ ಎಲ್ಲ ತಿನ್ದೆ (without eating, ತಿನ್ನದೇ) ಯಾವ್ ಕಾಲ ಆತು ಅನ್ಸಿತ್ತು. ನಿನ್ನೆ ಬಾಲಣ್ಣ ಫೋನಾಯಿಸಿ ಅಪ್ಪಿ ಒಂದು 5 ಪೌಂಡು ಜಿಲೇಬಿ ತಂದ್ಬಿಡು ಅಂದ್ ಕೂಡ್ಲೇ ಯಾನಮ್ನಿ ಕುಶಿ ಆತು. ಇವತ್ತು ಬೆಳ್ಬೆಳಿಗ್ಗೆ ಅಂಗ್ಡಿಗೆ ಹೋಗಿ ಐದರ ಬದಲಿಗೆ ಆರು ಪೌಂಡ್ ಜಿಲೇಬಿ ತಗಂಡ್ ಪಿಕ್ನಿಕ್ ಏರಿಯಕ್ಕೆ ಹೊಂಟಿ.

ಅಲ್ಲಿ ಹೋಗಿ ಸ್ವಲ್ಪ ಅದು ಇದು ಜೋಡ್ಸ ಹೊತ್ತಿಗೆ ಕಿರಣ ಬಂದ. ಇವತ್ತು ಜಿಲೇಬಿ ತೈನ್ದಿ ಅಂದ್ ಕೂಡ್ಲೇ ಹಂಗಿರೆ competition ಮಾಡನ ಅಂತ ಹೇಳ್ದ. ಜನ ಎಲ್ಲ ರಸಪ್ರಶ್ನೆ, ಮಕ್ಕಳ ಓಟ, ಹಿರಿಯರ ಓಟ, ಮುಗಿತಿದ್ದಂಗೆ ಊಟಕ್ಕೆ ರೆಡಿ. ಎಲ್ರ ಊಟ ಮುಗಿತಾ ಬಂದಂಗೆ ಜಿಲೇಬಿ ಖಾಲಿ. ಅಯ್ಯೋ ರಾಮ, ಒಳ್ಳೆ ಕತೆ ಆತಲ ಇದು ಹೇಳ್ಕೋತ ನಾನು ಅಲ್ಲೇ ಉಳ್ದಿದ್ದ ಜಿಲೇಬಿದು ಕೈ ಕಾಲು ತಿಂತ ಇದ್ದಿ. ಕೊನಿಗೆ ನೋಡಿರೆ ಒಂದು ಟ್ರೆಯ್ ನಲ್ಲಿ ಸುಮಾರು ಜಿಲೇಬಿ ಉಳ್ದಿತ್ತು. ಹಂಗೆ ಎಲ್ಲರಿಗೂ competition ಹೇಳಿ ಕರದ್ರೆ, 'ಜಿಲೇಬಿಈಈಇ!!! ಐದರ ಮೇಲೆ ತಿನ್ನದಾಆಆ...' ಹೇಳ್ಕ್ಯೋತ 'ನಾ ಬತ್ನಲ್ಲೇ' ಹೇಳಿದ್ವಪ. ಕೊನಿಗೂ ಕಿರಣ, ನಾಗರಾಜ (ಬೇ ಏರಿಯ ಹವ್ಯಕಕ್ಕೆ ಹೊಸ ಸೇರ್ಪಡೆ. ನಮ್ಮ ಮಲ್ಲೇಶ್ವರಂ ಹವ್ಯಕ ಹಾಸ್ಟೆಲ್ ಹುಡ್ಗ), ರುಚಿತಾ (ನಿಜ ಹೇಳಕ್ಕು ಅಂದ್ರೆ ಇವಳ ಸ್ಪೋರ್ಟಿಂಗ್ ಸ್ಪಿರಿಟ್ ಗೆ ಮೆಚ್ಚಿದಿ ನಾನು, hats off!!) ಮತ್ತೆ ನಾನು.

ಅಂತು ಇಂತೂ ನಂಗೆ ಕ್ಯಾಸನೂರು ಲಿಂಕ್ ಇರ ಕಿರಣನ್ನ ಸೋಲ್ಸಕ್ಕೆ ಆಗಲ್ಲೆ. ನಾನು ಒಂದೇಳು ಜಿಲೇಬಿ ತಿಂದಿ, ಅವ ಹತ್ತು ತಿಂದ. (ಈ ಕೌಂಟರ್ ಊಟದ ಜೊತೆಗೆ ತಿಂದಿದ್ದು ಬಿಟ್ಟು). ಒಳ್ಳೆ ಮಜಾ ಬಂದಿದ್ದು ಹೌದು ಮಾತ್ರ.. ಊಟೆಲ್ಲಾ ಆದ ಮೇಲೆ ಸ್ವಲ್ಪ ಹೊತ್ತು ವಾಲಿಬಾಲ್ ಆಡಿ ಜಿಲೇಬಿ ಎಲ್ಲ ಕರ್ಗ್ಸಿ ಮನೆ ಕಡಿಗೆ ಹೊಂಟಿ.

ಅಯ್ಯೋ... ಹೇಳಕ್ಕೆ ಮರ್ತು ಹೋಗಿತ್ತು :-) ಬೆಳಿಗ್ಗೆ ಪಾರ್ಕಿಗೆ ಪಿಕ್ನಿಕ್ ಗೆ ಹೇಳಿ ಹೋದ್ರೆ, ನಂ ಬಾಲಣ್ಣನ ಮಕ್ಳು ಚೊಲೋ ಮಾಡಿ "ಹುಲಾ ಹೂಪ್ಸ್" ಮಾಡ್ತಾ ಇದ್ದಿದ್ದ. ಸ್ವಲ್ಪ ಹೊತ್ತು ನೋಡಿದಿ ಚೆನಾಗನ್ಸ್ಚು, ನನ್ಗಕ್ಕೆಲ್ಲ ಅಲ್ಲ.. ಬರಿ ಹುಡ್ಗ್ರಿಗೆ ಅದು ಹೇಳಿ ಸುಮ್ನಾಗಿದ್ದಿದ್ದಿ. ಹಂಗೆ ಜನ ಬಂದ, ಅವ್ರ ಜೊತಿಗೆ ಸುಮಾರು ಸಣ್ಸಣ್ ಹುಡಗರು ಬಂದ.. ಅವರೆಲ್ಲ ಎಲ್ಲೊ ಹುಟ್ತಾನೆ ಕಲ್ತಿದ್ವೇನ ಅನ್ನೋ ತರ ಆರಾಮಾಗಿ ಹುಲಾ ಹೂಪ್ ಮಾಡ್ತಾ ಇದ್ದಿದ್ದ.. ನಂಗೆ ತಡಿಯಕ್ಕೆ ಆಗಲ್ಲೆ.. ನಾನು ಮಾಡದೆ ಸೈ ಹಂಗಿದ್ರೆ ಇವತ್ತಿಗೆ ಹೇಳಿ ನಿರ್ದಾರ ಮಾಡಿದ್ದಲ. ಹೋಗಿ ನೋಡಿರೆ ಮೊದ್ಮೊದ್ಲು ಒಂದು ಅಥ್ವಾ ಎಲ್ಡು ಸಲ ತಿರ್ಗ್ತಿದ್ದಂಗೆ ಬಿದ್ದೊಗ್ತಿತ್ತು. ಆದ್ರೂ ಹಠ ಬಿಡ್ದೆ ಸುಮಾರು ಹೊತ್ತು ಕಲ್ತಿ. ಸುಮಾರು ಸಣ್ಣ ಹುಡಗರು ನಂಗೆ ಹೇಳ್ಕೊಟ್ಟ. ಸುಳ್ಳಲ್ಲ.. ಸಣ್ಣಕ್ಕಿದ್ದಾಗ ಮೈ ಕುಣ್ಸಿದ ಹಂಗೆ ದೊಡ್ದಕಾದ್ ಮೇಲೆ ಕಷ್ಟ. ಎಂತಾರು ಆಗ್ಲಿ, ಈ ಪಿಕ್ನಿಕ್ ಹೇಳೆಲಿ ಹುಲಾ ಹೂಪ್ಸ್ ಒಂದು ಕಲ್ತಿ ಹೇಳಿ ಆತು. ಕೊನಿಗೆ ಹೆಚ್ಚು ಕಡಮೆ ಎರಡರಿಂದ ಮೂರು ನಿಮಿಷ ಹುಲಾ ಹೂಪ್ಸ್ ರಿಂಗ್ ನ ಬಿಳ್ಸ್ದೆ ಮೈ ಕುಣ್ಸದು ಕಲ್ತಿ.

ಸುಮಕ್ಕಂಗೆ ಒಂದು ದನ್ಯವಾದ. ಫೋಟೋ ತೆಗೆದಿದ್ದಕ್ಕೆ.



ರಾಜೇಶಣ್ಣ ತೆಗ್ದ ಸುಮಾರು ಫೋಟೋಗಳು ಇಲ್ಲಿದ್ದು.. ಪುರ್ಸ್ಹೊತ್ತಿದ್ದಾಗ ನೋಡಿ
ಸುಮಕ್ಕ ತೆಗೆದ ಸ್ವಲ್ಪ ಫೋಟೋಗಳು ಇಲ್ಲಿ..

ಗುರುವಾರ, ಮಾರ್ಚ್ 12, 2009

ಬಿಟ್ಬಿಡ್ಲಾಗ ಹೇಳಿ...

ಹೌದು ಮತ್ತೆ.. ಕೆಲ್ಸ ಕೆಲ್ಸ ಹೇಳ್ಕ್ಯೋತ ಬರ್ಯದೆ ಬಿಟ್ಬಿಟ್ರೆ ಸ್ವಲ್ಪ ವರ್ಷ ಆದ್ಮೇಲೆ ಬರ್ಯಕ್ಕೆ ಪುರ್ಸೋತ್ತಿದ್ರೂ ಬರ್ಯಕ್ಕೆ ಬತಲೆ. ಅದ್ರಗೂ ನನ್ ತರ ಮೈಗಳ್ರಿಗೆ, ಮೊದ್ಲೆ ಬರ್ಯಕ್ಕೆ ಬತಲೆ, ಬಿಟ್ರೆ ಅಕ್ಷರವೂ ಮರ್ತು ಹೋಗ್ತು ಅಷ್ಟೆ.

ಬರ್ಯದು ಎಷ್ಟು ಮುಖ್ಯ ಈಗಿನ್ ಕಾಲ್ದಗೆ ಅಂದ್ರೆ, ಒಳ್ಳೊಳ್ಳೆ ಬ್ಲಾಗು, ಲೇಖನ ಬರ್ದ್ರೆ ನಂ ಹುಡ್ರು ಪುಲ್ ಪಾಪುಲರ್ ಆಗೋಗ್ತ. ಹಂಗೆ ಇದೊಂತರ ಸಮಾನ ಮನಸ್ಕರ ಬಳಗ ಹುಟ್ಟಾಕ್ಕಕ್ಕೂ ಉಪಯೋಗಕ್ಕೆ ಬತ್ತು. ಅದೊಂದೇ ಅಲ್ಲ.. ಈ ಇಂಟರ್ನೆಟ್ ಯುಗದಲ್ಲಿ ನಮ್ದೊಂದು ಬ್ಲಾಗ್ ಇಲ್ಲೇ ಅಂದ್ರೆ, ಆರ್ಕುಟ್/ಫೇಸ್ ಬುಕ್ ಅಕೌಂಟ್ ಇಲ್ಲೇ ಅಂದ್ರೆ, IM ನಲ್ಲಿ (may be yahoo, gtalk, AIM, irc, jabber, msn etc) ಲಾಗಿನ್ ಆಗಿರ್ದೆ ಹೋದ್ರೆ ಬದ್ಕಿದ್ದೆ ಸುಳ್ಳೆನ ಅಂತ ಆಗೋಗ್ತು. ಅದಕ್ಕೆ ಸುಮ್ನೆ ಬಿಟ್ಬಿಡ್ಲಾಗ ಹೇಳಿ ಈ ಪೋಸ್ಟು.

ಸದ್ಯ ರೆಸೆಶನ್ ಬೇರೆ, Q1 ಬೇರೆ ಮುಗೀತ ಬಂತು. ನಂ ಕಂಪನಿ ಈಗ ವೆಂಚೆರ್ ಕ್ಯಾಪಿಟಲಿಸ್ಟ್ ಗಳ ಕೈಲಿ ಸ್ವಲ್ಪ ದುಡ್ಡು ಇಸ್ಕಂಡು ದೊಡ್ಡ ಆಪಲೇ ಹೊಂಟಿದ್ದು, ಖುಷಿ ವಿಚಾರ. ಆದ್ರೆ ಅದ್ರ ತೊಂದ್ರೆ ಎಂತಪ ಅಂದ್ರೆ, ತಿಂಗ್ಳು ತಿಂಗ್ಳು ದುಡ್ಡು ಎಷ್ಟು ಆತು, ಎಷ್ಟು ಜನ ಹೊಸ ಗ್ರಾಹಕರು ಸಿಕ್ಕಿದ್ದ, ಅದು ಇದು ಹೇಳಿ ತಲೆ ತಿಂತ. ಅದಕ್ಕೆ ನಂಗಂತೂ ಮು.ಹ. ಕೆಲ್ಸ. ನಮ್ದು ಬೇರೆ free software ಕಂಪನಿ. ನಂಗನೆ ಕೋಡ್ ಮಾಡಕ್ಕು, ನಂಗನೆ ಸಪೋರ್ಟ್ ಮಾಡಕ್ಕು. ನಂಗೆ ಬರಿ ಕೋಡಿಂಗ್ ಇಷ್ಟ, ಸಪೋರ್ಟ್ ಮಾಡದಿಲ್ಲೆ ಹೇಳ್ಕೋತ ಕುತ್ಕಂಡ್ರೆ ಹೊಟ್ಟಿಗಿರದಿಲ್ಲೆ.

ಇಷ್ಟು ಬರಿಯ ಹೊತ್ತಿಗೆ mailbox ನಲ್ಲಿ ಸುಮಾರು ಮೈಲ್ಸ್ ಬಂದು ಕೂತಿದ್ದ. Q1 ಮುಗ್ದ ಮೇಲೆ ಸಿಗ್ತಿ, ಅಲ್ಲಿವರಿಗೆ ಟಾಟಾ.

ಭಾನುವಾರ, ಮಾರ್ಚ್ 1, 2009

ಸುಮ್ಸುಮ್ನೆ..

* ಅಮೆರಿಕಕ್ಕೆ ಬಂದು ಒಂದು ವರ್ಷ ಕಳತ್ತು.
* ಜನವರಿಲಿ ಊರಿಗೆ ಹೋಗಿಬಂದು ಒಳ್ಳೆ ಖುಷಿ ಆತು, ಒಳ್ಳೆ ಅರಾಮಾಗಿ ರಜ ಕಳತ್ತು. ಸರಿ ತಿಂದಿದ್ದೆ ತಿಂದಿದ್ದು.. ಅನಿಲ (ಅಶ್ವಥ್ ಮಾವನ ಮಗ) ಬೇರೆ ಒಳ್ಳೆ ಜೊತೆ ಸಿಕ್ಕಿದ್ದ, ತಿರ್ಗಾಡಕ್ಕೆ ಸರಿ ಆಗಿತ್ತು.
* ಕಾನೂರು ಕೋಟೆ ಹೋಗಿದ್ದು ಒಳ್ಳೆ ಅನುಬವ, ಮಜಾ ಇತ್ತು.
* ಒಂದು ವರ್ಷ ಬೈಕು ಇಲ್ದೆ ಕೈ ತುರ್ಸ್ತಿದ್ದಿದ್ದು, ಬೆಂಗಳೂರಿಂದ ಸಾಗರಕ್ಕೆ ಬೈಕಗೆ ಹೋದಾಗ ಸ್ವಲ್ಪ ಸಮಾದಾನ ಆತು. ಇನ್ನೊಂದು ಸ್ವಲ್ಪ ತಿಂಗಳು ಇಲ್ಲಿ ಕಾರ್ ಓಡ್ಸಕ್ಕೆ ಅಡ್ಡಿಲ್ಲೆ.
* ಅಮೇರಿಕಾ ದಲ್ಲಿ ಪರಿಸ್ಥಿತಿ ಗಂಬೀರವಾಗೆ ನೆಡಿತಾ ಇದ್ದು, ಯಾವತ್ತು ಸರಿ ಆಗ್ತಾ ಗೊತ್ತಿಲ್ಲೆ.
* ನಮ್ ದೇಶದಗು ರಾಜಕೀಯ ಪರಿಸ್ಥಿತಿ ಒಳ್ಳೆ ರಗಳೆ ಆಗಿ ಕೂತಿದ್ದು, ಯೆಂತಾಗ್ತಾ ಗೊತ್ತಿಲ್ಲೆ. ಈ ಕಡೆ ಬೆಂಕಿ ಆ ಕಡಿಗೆ ಹುಲಿ ಹೇಳಹಂಗೆ ಆಗೊಯ್ದು.
* ನಮ್ ಕಂಪನಿ ನಮ್ ಬಾಸ್ ಮನೆ ರೂಮ್ ಇಂದ (400 sq ft), ಸುಮಾರೆ ದೊಡ್ಡ ಜಾಗಕ್ಕೆ ಬಂತು. ಸದ್ಯ ನಂಗ 7 ಜನಕ್ಕೆ 3500 sq. ft ಜಾಗ ಸುಮಾರೆ ದೊಡ್ಡ ಆದ್ರೂ, ಒಂದು ಟಿ ಟಿ ಬೋರ್ಡ್, ಒಂದು ಪೂಲ್ ಬೋರ್ಡ್ ತಂದು ಇಡ ಅಂದಾಜಿದ್ದು. ಆಡಕ್ಕೆ ಯಾವಾಗ ಪುರ್ಸೊತ್ತಾಗ್ತ ಗೊತ್ತಿಲ್ಲೆ.
* ಆಪೀಸು ಬದ್ಲಾತು ಅಂದ್ರೆ ನನಗೆ ಊಟಕ್ಕೆ ಕೋತ ಆಗ್ತು, ಎ೦ತೂ ಮಾಡಹಂಗೆ ಇಲ್ಲೆ. कुछ पाने के लिए कुछ कोना पड़ता हे।
* ಹೊಸ ಗೂಗಲ್ ಫೋನ್ ತಗಂಡಿದ್ದು ಒಳ್ಳೆ ಉಪಯೋಗಕ್ಕೆ ಬತಾ ಇದ್ದು.

ದಿನ ಕಳ್ದಿದ್ದೆ ಗೊತಾಗ್ತಾ ಇಲ್ಲೆ. ಎಂತಾರು ಬರಿಯಕ್ಕು ಮಾಡ್ಕ್ಯಳದೆ ಸೈ, ಆಗ್ತೆ ಇಲ್ಲೆ.

ಗುರುವಾರ, ಡಿಸೆಂಬರ್ 4, 2008

random post

--
ನೀಲಾಂಜನ ಕರೆ ಕೊಟ್ಟ ಹಾಗೆ, ಹಲವಾರು ಮಿತ್ರರು ಒಪ್ಪಿಕೊಂಡಿರುವ ಹಾಗೆ ನನ್ನ ಬ್ಲಾಗ್ ಸಹ ಕಪ್ಪು ಹಣೆಪಟ್ಟಿ ಕಟ್ಟಿಕೊಂಡಿದೆ.
ಹಾಗೆ ಕೈಗೆ ಸಹ :p

--

ಮನಸ್ವಿ ಬರೆದ ಹವ್ಯಕರ ಬಾಷೆಯ, ಜೀವನದ ಶೈಲಿಯ ಬ್ಲಾಗ್ ಮನಸ್ಸಿಗೆ ತುಂಬಾ ಮುದ ಕೊಟ್ಟಿದ್ದಂತು ನಿಜ. ಮದ್ವೆ ಮನೇಲಿ 20 ರಿಂದ 25 ಜಿಲೇಬಿ ತಿಂದಿದ್ದು, ದೊ೦ಬಾಳೆ, ಪಂಕ್ತಿ ಮೇಲೆ ಹೇಳ ಶ್ಲೋಕ ಎಲ್ಲ ಬರ್ತಿ 'miss' ಮಾಡ್ಕತ್ತ ಇದ್ದಿ..

--

Nov 20th, ನನ್ನ ಗೆಳೆಯ ನಾಗರಾಜ (aka, ರಾಜು), ಮತ್ತು ಗೆಳತಿ ಮಹಿಮಾಳ ಮದುವೆ ಇತ್ತು.. ಇಲ್ಲಿ ಒಂದು 'conference' ಇದ್ದಿದ್ದಕ್ಕಾಗಿ ಹೋಗಲಿಕ್ಕೆ ಆಗಲಿಲ್ಲ.. ಆದರೆ ಮನಸೆಲ್ಲ ಅಲ್ಲೇ ಇತ್ತು. ನನ್ನ ಒರೆಗೆಯ ಬಹುತೇಕ ಗೆಳೆಯರು ಅಲ್ಲಿದ್ದಿದ್ದು ಇನ್ನೂ ಸ್ವಲ್ಪ ಬೇಜರಾಗಲು ಕಾರಣ. ಅವರಿಬ್ಬರ ವೈವಾಹಿಕ ಜೀವನ ಸುಖಕರವಾಗಿರಲಿ ಎ೦ಬ ನನ್ನ ಹಾರೈಕೆ ಇದ್ದೆ ಇದೆ.

--

Nov 30th, ಒಂದೇ ದಿನ ನನ್ನ ಶಾಲಾ ಜೀವನದ ಗೆಳೆಯರಾದ ಶಶಿದರ (aka, MB) (with Vinuta) ಮತ್ತು ಅಮಿತ್ ರಾಜ್ (with Aditi) ಇಬ್ಬರ ಮದುವೆ ನಡೆಯಿತು. ಹಾಗೂ ನನ್ನ ಕಾಲೇಜಿನ ಮಿತ್ರರಾದ ಸುನಿಲ್ ಅಭಿಲಾಶ್ ಹಾಗು ಮದುಮಾಲ ಇವರ ಮದುವೆ ಕೂಡ ಇತ್ತು. ಇವೆಲ್ಲವನ್ನೂ ತಪ್ಪಿಸಿಕೊಂಡ ಬೇಜಾರಿದೆ. ಇವರೆಲ್ಲರಿಗೂ ವೈವಾಹಿಕ ಜೀವನದ ಶುಭಾಶಯಗಳು.

--

Lot more pending to write about mumbai blasts.. but my feeds bring 100s of different posts every hour or two about the same.. currently busy reading them.. overall its very sad thing which happened. I mourn for the families of victims, police, army personnel.

I hate those politicians who wanted to make politics out of national security issue. I hate those who make money out of public money, and don't even provide our police with proper gear.

--

ಗುರುವಾರ, ಅಕ್ಟೋಬರ್ 16, 2008

ಕೊನೆಕೊಯ್ಲು

ಒಂದ್ ತಿಂಗ್ಳಾತು, ಆಪಿಸಗೆ ಬರ್ತಿ ಕೆಲ್ಸ. ಇತ್ಲಗೆ ಮೊದ್ಲಂಗೆ ಹುಡ್ಗಾಟ್ಗೆ ಗಿಡ್ಗಾಟ್ಗೆ ಮಾಡಹಂಗೂ ಇಲ್ಲೆ. ಇದೇ ಹೆಳೆಲಿ ಸಣ್ಣಕ್ಕಿದ್ದಾಗಿನ್ ನೆನ್ಪು ತಲೇಲಿ ಗಿರ್ಕಿ ಹೊಡಿತಾ ಬಿದ್ದಿರ್ತ.

ಗಟ್ಟ ಹತ್ತಿ, ಅಗಳ ಹಾರಿ ಕಬ್ಬಿನ್ ಹಾಲು ಕುಡಿಯಲೆ ಗುಬ್ಗೋಡ್ಬದಿಗೆ ಹೋಗಿ ಬತ್ತಿದ್ಯ. ಹಂಗೆಯ ಯೆಮ್ಮನೆ ಅಂಗ್ಳ ದಾಟಕ್ಕಿದ್ರೆ 'ದೊಣಕ್ಲು ತೆಕ್ಕಂಡು ಹೋಗ ಮಾಣಿ' ಹೇಳಿರು ಕೇಳ್ದೆ ಕಂಕ್ಣಕ್ಕೆ ಕೈ ಕೊಟ್ಟು ಹಾರ್ಯೆ ಹೋಗ್ತಿದ್ದಿ. ಕೊನೆಕೊಯ್ಲು ಹೊತ್ತಗೆ ಅಟ್ಟದ್ ಮೇಲಿಂದ ಕೆಳಗಿದ್ದ ಮರ್ಳು ಗುಪ್ಪೆ ಮೇಲೆ ಹಾರದು ಒಂದು ಆಟಾಗಿತ್ತಪ. ಅದೂ ಕೊನೆಕೊಯ್ಲು ಅಂದ್ರೆ ಒಳ್ಳೆ ಚಳಿಗಾಲ, ಅಡ್ಕೆ ಬೇಯ್ಸಕ್ಕಿದ್ರೆ ಓಲೆ ಮುಂದೆ ನಾ ಹಾಜರ್. ಒಳ್ಳೊಳ್ಳೆ ಹಾಳೆಸಿಪ್ಪೆ, ಕಾಯ್ಸಿಬ್ಲು ಒಲಿಗೆ ಕೂಡಿಕ್ಕೆ ಹೊಗೆ ಮದ್ಯಕ್ಕೆ ಸಣ್ಣಕ್ಕೆ ಉಸ್ರಾಡ ಬೆಂಕಿಲಿ ಮೈ ಕಾಸ್ಕೊತ ಬಾಲಮಂಗಳ, ಚಂದಮಾಮ, ಅಥ್ವ ಅದೇ ಥರದ್ ಪುಸ್ತ್ಕ ಕೈಲಿ ಹಿಡ್ಕಂಡು ಕುತ್ಕಂಡ್ರೆ ಯೆಮ್ಮೂರ್ ಹೆಂಗುಸ್ರು ಹೇಳ ಸುದ್ದಿ ಕಿವಿಗೇ ಬಿಳ್ತಿರ್ಲೆ.

ರಾತ್ರೆ ಎಲ್ಲರೂ ಡಬ್ಬ, ಗಿದ್ನ, ಕೊಳ್ಗ ಹೇಳಿ ಅಡ್ಕೆ ಅಳ್ದಿಕ್ಕೆ ಮನಿಗೆ ಹೋದ್ಮೇಲೆ ನಂಗ ನಿದ್ದೆ ಮಾಡದಾಗಿತ್ತು. ನಂಗೆ ಯಾವ್ ತಲೆನೋವಗಾರು, ಎಂತ ಹೊತ್ತಗಾರು ಕೂಡ ನೆನಪಲ್ಲಿ ಬಂದು ಖುಷಿ ಕೊಡ ಒಂದು ವಿಚಾರ ಅಂದ್ರೆ ಕೊನೆಕೊಯ್ಲು.

ನಮ್ ಹುಡ್ಗ್ರು ಆಪಿಸಿಗೆ ಬರ ಹೊತ್ತಾತು, ಮತ್ಯಾವಾಗ್ಲಾದ್ರು ಬರಿತಿ.. ಸದ್ಯಕ್ಕೆ ಹೋಗ್ಬತ್ತಿ

ಮಂಗಳವಾರ, ಆಗಸ್ಟ್ 26, 2008

ಕಳೆದು ಹೋದ ಆರು ತಿಂಗಳು

ಹೇಳ್ದೆ ಕೇಳ್ದೆ ಆರು ತಿಂಗ್ಳಾಗೊತು! ಮಾಡಿದ್ದೆಂತಪ ಕೇಳಿರೆ ಯೆಂತೂ ಇಲ್ಲೆ.. ಹೊಗ್ಲಿ ಡಾಲರಗೆ ಸಂಬ್ಳ ತಗತ್ತೆ ದುಡ್ಡಾರು ಮಾಡಿದ್ಯೇನ ಕೇಳಿರೆ ಅದೂ ಇಲ್ಲೆ.. ಬರಿ ಸಾಲ. ಸಂಬ್ಳದಗೆ ಸೂರಿಗೆ, ಹೊಟ್ಟಿಗೆ ಸಾಕಾಗಿ ಹೊಗ್ತು. ಬಟ್ಟೆಗೂ ಬೇಕಿತ್ತು, ಆದ್ರೆ ಅದೆ ಹಳೆ ಬಟ್ಟೆ ಆಕಡಿಗೆ washerಗೆ, ಈ ಕಡಿಗೆ dryerಗೆ ಹಾಕಿ, ಉಡದು. ಅದು ಬಿಟ್ರೆ, ಇದ್ದಲ, ಮನಿಗೆ ಬಾಡ್ಗೆ, ಕಾರಿಗೆ ತಿಂಗ್ಳಾ ಬಾಬ್ತು.. ಇಂಟೆರ್ನೆಟ್ ಬಿಲ್ಲು, ಕರೆಂಟ್ ಬಿಲ್ಲು.. ಸುಮ್ನೆ ಹೇಳದಲ್ಲ ತಮ.. ಜನ ಬರಿ ಎಷ್ಟು ದುಡದ್ದ ನೊಡ್ತಾ ಬಿಟ್ರೆ, ಎಷ್ಟು ಖರ್ಚು ಮಾಡ್ತ ನೊಡದೆ ಇಲ್ಲೆ :O ಹೊಗ್ಲಿ, ಬಿಟ್ಹಾಕು! ಈ ದುಡ್ಡಿನ ವಿಚಾರ ತೆಗ್ದ್ರೆ ಯೆಂಗೆ ಒಂಥರಾ ಆಗ್ತು, ಬೇರೆ ವಿಚಾರಕ್ಕೆ ಬರನ.

ಈ ದೇಶಕ್ಕೆ ಬಂದು ಆರು ತಿಂಗ್ಳಗೆ ಒಳ್ಳೆ ಸಾದನೆ ಅಂದ್ರೆ,
* ice skiing ಮಾಡಿದ್ದು,
* skydiving ಮಾಡಿದ್ದು,
* Grand canyon ನಲ್ಲಿ, south rim ಇಂದ north rim ಗೆ ನೆಡ್ಕಂಡು ಹೋಗಿದ್ದು.
* Yosemite ನಲ್ಲಿ, Halfdome ಕಲ್ಲಿನ ಗುಡ್ಡನ ಒಂದೆ ದಿನ ಹತ್ತಿ ಇಳದಿದ್ದು.

ಆದು ಬಿಟ್ರೆ ಹಿಂಗೆ ಇರ್ಲಿ ಹೇಳಿ ಎರ್ಡುಗಾಲಿ skateboard ಕಲ್ತಿದ್ದಿ.. TT ಆಡಕ್ಕು ಹೇಳಿ ಒಂದು ಕ್ಲಬ್ ಗೆ ಸದಸ್ಯನಾಯ್ದಿ. ಬಿಟ್ರೆ ಬರಿ ಕೆಲ್ಸ ಕೆಲ್ಸ.

ಭಾನುವಾರ, ಆಗಸ್ಟ್ 10, 2008

ನೀರು.. beer-ಉ

ನಿಜ ಹೇಳಕ್ಕು ಅಂದ್ರೆ ಆನು ಸಣ್ಣಕ್ಕಿರಕ್ಕಿರೆ ಮಜಾ ಇತ್ತು, ಯಾರ್ ಮನೆದಾದ್ರು ತೋಟಕ್ಕೆ ಹೋಗಿ ಪ್ಯಾರ್ಲೆ ಕಾಯಿ ಕೊಯ್ಕಂಡು ತಿಂದು, ಅವ್ರತ್ರ ಬಯ್ಸ್ಕಂಡು ಎಂತೂ ಬೇಜಾರಿಲ್ದೆ ಮನಿಗೆ ಹೊಗ್ತಿದ್ಯ. ಬರಿ ತೋಟದ್ದ ಪ್ಯಾರ್ಲೆಕಾಯಿ ಒಂದೆ ಅಲ್ಲ.. ವಾಟ್ಪ್ಯಾರ್ಲೆ ಹಣ್ಣು, ಮುಳ್ಳಣ್ಣು, ರಂಜ್ಲೆ, ಸಂಪ್ಗೆ, ಮಾವಿನ್ಹಣ್ಣು, ಗೇರ್ಹಣ್ಣು, ಚೊಳ್ಳೆಹಣ್ಣು, ಹೊಳೆದಾಸ್ವಾಳ, ಕೌಳಿಕಾಯಿ, ನೇರ್ಲೆಹಣ್ಣು, ಮುರ್ನ್ಹುಳಿ, ಹಲ್ಸು... ಹೇಳ್ತಾ ಹೊದ್ರೆ ಯೆಲ್ಲಾ ಥರ ಹಣ್ಣು ನೆನ್ಪಾಗ್ತ. ಇಷ್ಟೆ ಅಲ್ಲ.. ಬಾಳೆಹಣ್ಣು, ನೆಲ್ಲಿಕಾಯಿ, ಕಬ್ಬು, ಕಾಕ್ಪಟ್ಲೆ, ಅನಾನಸ್, ಪಪಾಯ.. ಒಂದಾ ಯೆಲ್ಡಾ.. ಸಿಕ್ಸಿಕ್ಕಿದ್ ಮರ ಹತ್ತಿದ್ದು, ಸಿಕ್ಸಿಕ್ಕಿದ್ ಹಣ್ಣು ತಿಂದಿದ್ದು. ಹಣ್ಣು ಸಕಾಗಲ್ಲೆ ಹೇಳಿ ಹೂವಲ್ಲ ತಿಂದಿದ್ಯ ಯೆಂಗ, ಕಮಲದ ಹೂ ಬುಡ ಒಳ್ಳೆ ರವೆರವೆ ತರ ರುಚಿ ಇರ್ತು. ಬೆಳಿದಾಸ್ವಾಳದ್ದು ಕಷಾಯ ಒಳ್ಳೆ ರುಚಿ. ಹಣ್ಣು ಹೂವಿಗೆ ನಿಲ್ಸ್ದೆ, ಹಣ್ಣಿನ ಬೀಜ, ಬಳ್ಳಿ, ಎಲೆ, ಸೊಪ್ಪು, ಬೇರು, ಅದು ಇದು ಹೇಳಿ ಎಂತಾತ ಅದು ತಿಂದಿದ್ದು ನೆನ್ಪಿದ್ದು ಯೆಂಗೆ. ಆಸ್ರಾದ್ರೆ ನೀರು ಕುಡಿಯದು ಅಬ್ಯಾಸ, ಬಾವಿ ನೀರು, ಬೋರ್ವೆಲ್ ನೀರು, ಹೊಳೆ ನೀರು, ಕೆರೆ ನೀರು.. ಅಬ್ಬಿ ನೀರು.. ಹೇಳ್ಕ್ಯೊತ ಹೊದ್ರೆ ಸುಖಿಲ್ಲೆ. ತೀರ ಹೆಚ್ಚ್ಗೆ ಅಲ್ಲ.. ಬರಿ ೧೦-೧೫ ವರ್ಷ ಹಿಂದಪ, ಈಗೆಲ್ಲ ಯೆನ್ ಪಕ್ಕ ಇರ ಜನಕ್ಕೆ ಮಿನಿರಲ್ ವಾಟರ್ರೆ ಆಗಕ್ಕು, ಯೆಂಗೆ ಹೆಂಗಾತ ಹಂಗೆ, ಸುಮ್ಕೆ ಕುಡಿಯಕ್ಕೆ ನೀರು ಕೊಡ್ರಪ್ಪ ಹೇಳಿರು ಜನ, "ಬೇಡ ಕಣೊ, ಇಲ್ಲಿ risk ತಗೋ ಬೇಡ, ಯಾಕೆ ಸುಮ್ನೆ" ಅಂತ ಹೇಳಿ ಮಿನಿರಲ್ ವಾಟರ್ ಕುಡ್ಸ್ತ..

ಇಷ್ಟೆಲ್ಲ ಎಂತಕ್ಕೆ ಹೇಳಿದಿ ಅಂದ್ರೆ, ಆನು beer ಕುಡಿತಿ, (ತೀರಾ ಅಲ್ಲ.. ಆದ್ರು ಅವಾಗಿವಾಗ), ಅದು ವಿಜ್ಙಾನದ ಪ್ರಕಾರನೆ ಕೆಟ್ಟದ್ದು, ಆದ್ರು ಜನ ಎಂತು ಹೇಳದಿಲ್ಲೆ.. ಸೀದಾಸಾದ ನಲ್ಲಿ ನೀರು ಕುಡಿಯಕ್ಕೆ ಬ್ಯಾಡ ಹೇಳ್ತ.. ಬೇಜಾರಾಗ್ತು.. ಅಲ್ಲ.. ಭೂಮಿಯ ಮೇಲೆ ಇರೋದ್ರಲ್ಲೆಲ್ಲ ಸ್ಪೆಷಲ್ ಅಂದ್ರೆ ನೀರು ಹೇಳಿ ಸುಮಾರು ಜನ ಹೇಳ್ತ, ಅಂತದ್ರಲ್ಲಿ, ನಂಗ ನೀರನ್ನ ಕಣ್ಣು ಮುಚ್ಚಿ ಕುಡಿಯ ಹಂಗಿಲ್ಲೆ ಅಂದ್ರೆ ಬಾಳ ಬೇಜಾರಾಗ್ತು.. ಅವ್ರು ಹೇಳದೂ ಸುಳ್ಳಲ್ಲ.. ಇತ್ತಿತ್ಲಗೆ ಹ್ಯಂಗಾತ ಹಂಗೆ ನೀರು ಕುಡ್ದ್ರೆ ಜ್ವರ ಬರದೂ ನಿಜ.. ಹತ್ವರ್ಷ ಹಿಂದೆ ಸರಿ ಇದ್ದಿದ್ದು ನೀರು ಈಗ ಸರಿ ಇಲ್ಲೆ ಅಂದ್ರೆ ಯಾರು ಕಾರಣ ಅಂತ ಯೋಚ್ನೆ ಮಾಡಕ್ಕಾಗ್ತು.

ಎಂಗೆ ಸುಮಾರು ಜನ beer/alcohol ಕುಡಿಯಡ ಹೇಳಿ ಒತ್ತಾಯ ಮಾಡ್ತಾ ಇರ್ತ, ಇವತ್ತು ಕೈಲಿರ KF ಬಾಟ್ಲಿ ಮೇಲೆ ಪ್ರಮಾಣ ಮಾಡಿ ಹೇಳ್ತಾ ಇದ್ದೆ, ಯಾವತ್ತಿಗೆ ನಾನು, ಯಾವ್ ನಲ್ಲಿಲಾರು ಬರ ನೀರು ಕುಡಿಯ ಹಂಗಾಗ್ತ, ಯಾವ್ ಹೊಳೆ ನೀರು ಕುಡಿಯ ಹಂಗಿರ್ತ, ಯಾವ್ ನದಿ ನೀರಾರು ಖುಷಿಲಿ ಕುಡಿಲಕ್ಕ, ಅವತ್ತಿಂದ beer/alcohol ಮುಟ್ಟದಿಲ್ಲೆ...

ಸೋಮವಾರ, ಜುಲೈ 21, 2008

ನನ್ನಜ್ಜ

ನನ್ನಜ್ಜ ಇನ್ನಿಲ್ಲ.. ಇಂದು ಬೆಳ್ಳಿಗ್ಗೆ ಎದ್ದ ಕೂಡಲೆ ಮೊದಲು ಸಿಕ್ಕಿದ್ದ ಸುದ್ದಿ ಇದು. ಸುದ್ದಿ ತಿಳಿದು ಸ್ವಲ್ಪ ಸಮಯವಾದರೂ ಯಾವುದೆ ಬಾವನೆಗಳಿಲ್ಲದೆ ಕುಳಿತಿದ್ದೆನೆ ನಾನು, ಇಪ್ಪತ್ತುಸಾವಿರ ಮೈಲು ದೂರದಲ್ಲಿ. ಗೌಡ ಯಾವಾಗಲು ನನಗೆ ಬೈಯುವುದು ನೆನಪಾಗುತ್ತೆ.. "inhuman ನೀನು" ಎಂದು. ಬಹುತೇಕ ನಿಜ. ನನ್ನ ಪ್ರಕಾರ ಸಾವು ಎಲ್ಲರಿಗೂ ಖಚಿತ. ಬಹುಷಃ ಮೂರು ದಿನದ ಹಿಂದೆ ಅಜ್ಜನಿಗೆ "brain hemorrhage" ಆಗಿದೆ ಎಂದು ಸುದ್ದಿ ಬಂದಾಗಲೆ ಈ ಬಾರಿ ಆಸ್ಪತ್ರೆಯಿಂದ ಹೊರಬರುವುದು ಅನುಮಾನ ಎಂಬ ಬಾವನೆ ಅಮ್ಮನ ದ್ವನಿಯಲ್ಲಿತ್ತು. ಅದರಿಂದಲೆ ಏನೋ, ಇಂದಿನ ಸುದ್ದಿ ಬರಸಿಡಿಲಿನಂತೆ ನನ್ನನ್ನು ಅಪ್ಪಳಿಸಲಿಲ್ಲ.

ಅಜ್ಜನಿಗೆ 86 ವರ್ಷ ವಯಸ್ಸಾಗಿತ್ತು, ಅವರ ಮೊದಲ ಮೊಮ್ಮಗ ನಾನು. (ನನ್ನ ಅಮ್ಮ ಅವರ ಹಿರಿಯ ಮಗಳು). ತುಂಬಾ ಇಷ್ಟ ನನ್ನನ್ನು ಕಂಡರೆ. ನಾನು ಸಣ್ಣವನಿರುವಾಗ, ಒಟ್ಟೊಟ್ಟಿಗೆ ಅಜ್ಜನ ಮನೆಯಲ್ಲಿ ಗೂಡು ಕಟ್ಟಿದ ಗುಬ್ಬಚ್ಚಿಗಳಿಗೆ ಅಕ್ಕಿ ಕಾಳು ಕೊಡುತ್ತಿದ್ದೆವು. ಅಜ್ಜ ದೇವಸ್ಥಾನದ ಪೂಜೆಗೆ ಹೊಗುವ ಮೊದಲು ತೀರ್ಥದಲ್ಲಿ ಒಮ್ಮೆ ಈಜಾಡಿ ಮಡಿಯಲ್ಲಿ ಗರ್ಭಗುಡಿ ಹೊಕ್ಕರೆ, ಪುಕ್ಕಲ ನಾನು, ನೀರು ಕಂಡರೆ ಹೆದರಿಕೆ, ಬರಿ ಕೈಕಾಲು ತೊಳೆದು, ಚಿಕ್ಕವ ಎಂಬ ರಿಯಾಯಿತಿ ಮೇಲೆ ಅಜ್ಜನೊಟ್ಟಿಗೆ ಹೊಗುತ್ತಿದ್ದೆ. ಆ ಸಮಯದಲ್ಲಿ ಅಜ್ಜನ ಮನೆಯಲ್ಲಿ ಎತ್ತಿನ ಗಾಡಿಯಿತ್ತು. ಹೋಗುತ್ತಿರುವ ಗಾಡಿಗೆ ಹಿಂದಿಂದ ಹಾರಿ ಹತ್ತುವುದು, ಗಾಡಿ ಓಡಿಸಿದ ನೆನಪುಗಳು ಮಸಕು ಮಸಕಾಗಿ ಮನದಾಳದಲ್ಲಿ ಹುದುಗಿವೆ. ಆ ದಿನಗಳಲ್ಲಿ, ಅಜ್ಜನ ಮನೆಯಲ್ಲಿ ನೆಡೆಯುವ ನವರಾತ್ರಿ ಹಬ್ಬಕ್ಕೆ ಬೇರೆಯದೆ ಕಳೆಯಿತ್ತು. ಒಟ್ಟಾರೆ, ವರದಾಮೂಲದಲ್ಲಿ ನವರಾತ್ರಿ ಹಬ್ಬಕ್ಕೆ ಎಷ್ಟೊಂದು ನೆಂಟರಿಷ್ಟರು, ಪ್ರತಿವರ್ಷ ಬೇರೆ ಬೇರೆ ರೀತಿಯ ಮಂಟಪಗಳು, ನವರಾತ್ರಿಯ ಒಂದೊಂದು ರಾತ್ರಿ ನೈವೇದ್ಯಕೆ ಒಂದೊಂದು ಬಗೆಯ ಬಕ್ಷ್ಯಗಳು.. ಈಗಲೂ ಬಾಯಲ್ಲಿ ನೀರೂರುತ್ತದೆ. ಅಜ್ಜನಿಗೆ ಐವರು ಹೆಣ್ಣುಮಕ್ಕಳು, ಒಬ್ಬ ಮಗ. ನನ್ನಮ್ಮ ಮೊದಲ ಮಗಳು. ಮನೆಯಲ್ಲಿ ಬಡತನ ಇದ್ದೆ ಇತ್ತು, ಆದರೂ ಅಜ್ಜ ಶ್ರೀಮಂತಿಕೆಗೆ ಆಸೆ ಪಟ್ಟವರಲ್ಲ.

ಅಜ್ಜನ ಕಾಲಕ್ಕೂ ನಮ್ಮ ಕಾಲಕ್ಕೂ ಇರುವ ವ್ಯತ್ಯಾಸಗಳು ನನ್ನ ಅಜ್ಜನ ಇತ್ತಿಚಿನ [೩-೪ ವರ್ಷಗಳ] ಕೆಲವೊಂದು ಬೇಟಿಯಲ್ಲಿ ಗೊತ್ತಾಗುತ್ತದೆ.

ಅಜ್ಜ: "ಯೆಂತೊ ಅಪಿ! ಹೊಸ ಮೆಟ್ಟು ತಂಗಡಂಗೆ ಕಾಣ್ತು?"
ನಾನು: "ಹೌದ ಅಜ, ಬೇಕಲ, ಆಫೀಸಿಗೆ ಹೊಪ್ಲೆಲ್ಲ"
ಅಜ್ಜ: "ಚಲೊ ಇದ್ದಲ, ಎಷ್ಟು ಮಡ್ಗಿದೆ? 200 ರುಪಾಯಾರು ಆಗಿಕ್ಕು"
ನಾನು: [ಸ್ವಲ್ಪ ಹಿಂದೆಮುಂದೆ ನೊಡುತ್ತ] "ಅದಕ್ಕೂ ಸ್ವಲ್ಪ ಹೆಚ್ಗೆ ಕೊಟಿದ್ನ" [ನಿಜವಾದ ದರ: 2000Rs]
......

ಅಜ್ಜ: "ನಿಂಗೆ ಸಕಾಗ ಅಷ್ಟು ಸಂಬ್ಳ ಬತ್ತನ ಅಪಿ?"
ನಾನು: "ಸಕಾಪ ಅಷ್ಟೆಲ್ಲ ಬತಲ್ಯ ಅಜ, ಆದ್ರೂ ಅಡ್ಡಿಲ್ಲೆ, ತೀರಾ ಕಡ್ಮೆನು ಬತಲೆ.. ಮದ್ಯಕೆ"
ಅಜ್ಜ: "ಹಂಗರೆ ಒಂದೈದು ಸಾವ್ರನಾರು ಬತಲ್ಯನ?"
ನಾನು: "ಐದು ಸಾವ್ರ!! ಅಜ, ಆನು ಸಾಗರದಗಿಲ್ಲೆ, ಬೆಂಗಳೂರಗಿದ್ದಿ, ಅದಕ್ಕಿಂತ 8-9 ಪಟ್ಟು ಹೆಚ್ಗೆ ಬತ್ತ ಮಾರಯ"
[ಪುಣ್ಯ! ಅವತ್ತೆ ಅಜ್ಜನಿಗೆ heart attack ಅಗಲಿಲ್ಲ]
ಅಜ್ಜ: [:O] "ಅಷ್ಟೆಲ್ಲಾ ಕೊಡ್ತ್ವಾ? ಎಂತ ಕೆಲ್ಸ ಮಾಡ್ತ್ಯೊ ನೀನು?"
............

ನನ್ನ ಮೇಲೆ ಸ್ವಲ್ಪ ಬೇಜಾರಿತ್ತು ಅವರಿಗೆ, ಉಪನಯನ ಆದ್ರೂ ಸಂದ್ಯಾವಂದನೆ ಮಂತ್ರ ಬರೊಲ್ಲ, ಪೂಜಾಮಂತ್ರಗಳು ಬರೊಲ್ಲ ಅಂತ. ಈಗ ಅಜ್ಜನಿಗೆ ಸಂಬಂದಪಟ್ಟ ಎಲ್ಲಾ ವಿಚಾರಗಳೂ ಬರಿ ನೆನಪು ಮಾತ್ರ :( ಅವರ ಕಾಲು ಮೆಟ್ಟಿ massage ಮಾಡ್ತಾ ಇದ್ದಿದ್ದು, ಒಲೆ ಮುಂದೆ ಕುತು ಎಣ್ಣೆ ಹಚ್ಚಿ ಕೈ ಒತ್ತಿದ್ದು, ಅವರು ಬೆಳ್ಬೆಳ್ಳಿಗ್ಗೆ ಯೆದ್ದು, ನನ್ನ ಎಬ್ಬಿಸಿ, ದೆವ್ರಿಗೆ ಹೂವು ಕೊಯ್ಲಿಕ್ಕೆ ಕರ್ಕೊಂಡು ಹೊಗ್ತಿದ್ದಿದ್ದು, ದಿನಾ ಸಯಂಕಾಲ ತೀರ್ಥದಲ್ಲಿ ಈಜಾಡಿ, ಸಂದ್ಯಾವಂದನೆ ಮಾಡ್ತಿದ್ದಿದ್ದು, ನವರಾತ್ರೆಯ ಪೂಜೆ, ಎಲ್ಲವು ಬರಿ ನೆನಪು. ಆದರೆ, ಈ ನೆನಪುಗಳು ನನ್ನಲ್ಲಿ ಅಮರವಾಗಿರುತ್ತವೆ.

ಶನಿವಾರ, ಜೂನ್ 28, 2008

ನಿಮ್ಮ ಕಂಪನಿಗೆ ಅಂತ ತಗೋತಿನಿ

ಇವತ್ತು ಆಫೀಸ್ ನಿಂದ ಹೊರಡ್ತಾ ಇದ್ದ ಹಾಗೆ, ಅಲ್ಲೆ ನಮ್ಮ CTO ಗೆ ತುಂಬಾ ಬೇಕಾದವರ ಮನೆಯಿಂದ ಫೋನು, ನಮ್ಮನೆಗೆ ಬಾ, ಮಸಾಲಾ ಪುರಿ ರೆಡಿ ಇದೆ ಅಂತ. ಅವ್ರು ನನ್ನನ್ನ ಕೇಳಿದ್ರು ಹೋಗೊಣವಾ? ಅಂತ, ಎಂಗೆಂತ ಮಳ್ಳ ಹೊಗ್ದೆ ಇರಕ್ಕೆ, ಬಿಟ್ಟಿ ತಿನ್ನಕ್ಕೆ ಸಿಕ್ರೆ ಎತ್ಲಗಾದ್ರು ಹೋಗಕ್ಕೆ ರೆಡಿ ಆನು, ತೀರ ತಲೆ ಹೊಗ ಕೆಲ್ಸ ಎಂತು ಬಾಕಿ ಇರ್ಲೆ, ಅದಕ್ಕೆ ಅಲ್ಲಿಗೆ ಹೊದ್ಯ. ಅಲ್ಲಿ ಹೋದ್ರೆ ಗಾಯತ್ರಕ್ಕನ ಚಿಕ್ಕಪ್ಪ ಬಂದಿದ್ದ, "ಕುಡಿತ್ಯನಾ?" ಕೇಳಿದ, ಅಯ್ಯೋ ದೇವ್ರೆ, ಈ ದೇಶಕ್ಕೆ ಬಂದಮೇಲೆ ಕುಡಿಯಕ್ಕೆ ಒಳ್ಳೆ ಜೊತೆ ಇಲ್ಲೆ ಹೇಳಿ ಬೇಜಾರಲ್ಲಿದ್ದ ನಂಗೆ ಒಳ್ಳೆ ಜೊತೆ ಸಿಕ್ಕಿದ ಹಂಗಾತು ಹೇಳಿ, "ಓಕೆ! ಅಂಕಲ್" ಅಂತ ಹೇಳಿದಿ, ಅವ್ರು ವೋಡ್ಕ ಬಾಟ್ಲಿಯಿಂದ ಸುಮಾರು ಸುರ್ದ ಕೂಡ್ಲೆ, ಸಾಕು ಅಂಕಲ್, ನಿಂಬು ಇದ್ರೆ ಹಾಕಿ ಅಂತ ಹೇಳಿದಿ. ಅವ್ರು ಫುಲ್ ತಂಡ್! "He is a seasonal drinker! you see" ಅಂತ ಎಲ್ಲರಿಗೂ ಹೇಳದಾ? ಎಂಗೆ ನಾಚ್ಕೆ! ಮಳ್ಳನ, 70 ವರ್ಷ ಆದವ್ರು, ಕುಡ್ದು ಸುಮಾರು ಅನುಬವ ಇರೋರು ಈ ತರ ಹೇಳಿದ್ರೆ ಎಂತಾಗಡ? ಅಲ್ಲಿ ನನ್ನ ಬಗ್ಗೆ ಒಳ್ಳೆ (ಅಂದ್ರೆ 'ತಮ್ಮ' ಅನ್ನೊ) ಬಾವನೆ ಇಟ್ಕೊಂಡ ಕೆಲಾವೊಬ್ರು ಫುಲ್ ಶಾಕ್! ಸುಮ್ನೆ ಹೇಳದಲ್ಲ, ನಾನು ಹೆಂಡದ್ ಅಂಗಡಿಲಿ ನೊಡ್ದೆ ಇರ ಬ್ರಾಂಡೆಲ್ಲ ಅಲ್ಲಿದ್ದಿದ್ದ, ತೀರ ಬೇಡ ಹೇಳಕ್ಕೆ ಮನ್ಸು ಬರ್ಲೆ, "ಆಗ್ಲಿ ಅಂಕಲ್! ಯೇನೊ, ನಿಮ್ಗೆ ಕಂಪನಿಗೆ ಅಂತ ಸ್ವಲ್ಪ ಇರ್ಲಿ" ಅಂತ ಹೇಳಿ ಕುಡಿಯಕ್ಕೆ ಕೂತಿ. ಒಳ್ಳಿ ರುಚಿ ರುಚಿ ಅಡ್ಗೆ, ಅದ್ಕೆ ತಕ್ಕ ಹಂಗೆ ಹಪ್ಳ, ಮಸಾಲ ಪುರಿ, ಅದು ಇದು ಹೇಳ ಒಳ್ಳೆ ಜೊತೆ ಆತು. ಅಂಕಲ್ ಬೇರೆ ಅವ್ರ ಅನುಬವದ ಒಳ್ಳೋಳ್ಳೆ ಕಥೆ ಹೇಳ್ತಾ ಇದ್ದ, ಕೇಳ್ತಾ ಕೇಳ್ತಾ ವೊಡ್ಕ ಬಾಟ್ಲಿ ಪೂರ್ತಿ ಖಾಲಿ ಆಗಿ ಅಂಕಲ್ ವೈನ್ ಬಾಟ್ಲಿ ತೆಗ್ದ. ಸ್ವಲ್ಪ ಹೊತ್ತು ಬಿಟ್ಟು ಅದೂ ಖಾಲಿ :ಓ, ಎಂತಾರು ಹೇಳು, ಇಷ್ಟೆಲ್ಲದರ ಮದ್ಯ ಬಂದ ವಿಚಾರಗಳು ಬಹು ಮುಖ್ಯವಾದುದ್ದಾಗಿತ್ತು. ಮಕ್ಕಳು, ಅವರ ಬೆಳವಣಿಗೆ, ಅದಕ್ಕಾಗಿ ಅಪ್ಪ ಅಮ್ಮ ಏನೇನು ತ್ಯಾಗ ಮಾಡಬೇಕಾಗುತ್ತದೆ, ಮುಂತಾದವುಗಳು. ಒಟ್ಟಾರೆ ಇಲ್ಲಿ ಬಂದ ಮೇಲೆ ಕಳೆದ ಒಂದು ಸುಂದರ ಸಂಜೆ

ಭಾನುವಾರ, ಜೂನ್ 15, 2008

ಒಂಟಿತನ - ೧

ಇಲ್ಲಿಗೆ ಬಂದು ಮೂರುವರೆ ತಿಂಗಳಾಯಿತು! ನನ್ನ ಜೀವನದಲ್ಲಿ ಇದೆ ಮೊದಲ ಬಾರಿಗೆ ನಾನು ಇಷ್ಟು ದಿನಗಳ ಕಾಲ ಒಂಟಿಯಾಗಿ ಕಳೆದಿದ್ದೆನೆ. ಬಹುಷಃ ಇನ್ನು ಬಹುದಿನಗಳನ್ನು ಇದೆ ರೀತಿಯಲ್ಲಿ ಕಳೆಯ ಬೇಕಾಗುತ್ತದೆ :(

ನಾನು ಎನನ್ನಾದರು ಅತ್ಯಂತ ಹೆಚ್ಚಾಗಿ ದ್ವೇಷಿಸೋದಿದ್ದರೆ ಅದು 'ಒಂಟಿತನ'. ಮಾನಸಿಕ ಒಂಟಿತನ. ನಾನು ಕೆಲವೊಮ್ಮೆ 5-6 ದಿನಗಳು ಮನೆಯಿಂದ ಹೊರಗೆ ಹೊಗದೆ, ಬರಿ ಹಾಸಿಗೆಯ ಮೇಲೆ ಒರಗಿ ದಿನಗಟ್ಟಲೆ ನನ್ನ ಲ್ಯಾಪ್ಟಾಪ್ ನ ಕೀಲಿಪಟ ಒತ್ತುತ್ತ, ಕಪ್ಪು ಪರದೆಯ ಮೇಲೆ ಬರುವ log messages ನೊಡುತ್ತಾ, emacs ನಲ್ಲಿ ಕೋಡ್ ಬರೆದು, compile ಮಾಡಿ, memory leaks ಇದ್ಯಾ ನೊಡ್ಕೊತಾ ಕಳೆದಿದ್ದಿದೆ. ನಾನು ಬರೆದ ಕೋಡ್ ನಲ್ಲಿ ಏನೋ ಸರಿ ಇಲ್ಲ ಅನಿಸಿದರೆ ರಾತ್ರೆಯಲ್ಲ ಅದರ ಬಗ್ಗೆನೆ ಯೋಚಿಸುತ್ತಾ ಮಲಗಿ ಬೆಳ್ಳಿಗ್ಗೆ ಎದ್ದು, ಆ bug fix ಮಾಡಿದ್ದಿದೆ. ನನಗೆ ಕೆಲಸದ ಬಗ್ಗೆ ಇಲ್ಲಿಯವರೆಗೆ ಬೇಜಾರಾಗಿಲ್ಲ. ಕಳೆದ ಎರಡು ವರ್ಷದಲ್ಲಿ ಬಹುಷಃ 20ಕ್ಕೂ ಹೆಚ್ಚು ದೇಶಗಳ ಜನ ಪರಿಚಯ ಆಗಿದ್ದಾರೆ. ಎಲ್ಲವೂ ಸಂತೋಷಮಯ. ಎರಡೇ ವರ್ಷದ ಹಿಂದೆ ನನ್ನ ಸ್ನೇಹಿತ ಅವತಿ ನನ್ನನ್ನು "ನಮ್ಮ ಕಂಪನಿಗೆ ಬರ್ತೀಯಾ?" ಅಂತ ಕೇಳಿದಾಗ, "ಖಂಡಿತಾ!" ಎಂದು ಕ್ಷಣ ಮಾತ್ರದಲ್ಲಿ ಉತ್ತರಿಸಿದ್ದೆ. ಅಂದು ಕಂಪನಿಯಲ್ಲಿದ್ದಿದ್ದು ಬರಿ 5 ಜನ, (3 ಜನ ಬಾರತದಲ್ಲಿ, ಇಬ್ಬರು us ನಲ್ಲಿ). ಅಲ್ಲಿಂದ ಮುಂದೆ ನಮಗೆ ಗೊತ್ತಿರೋ, ನಮ್ಮ ಜೊತೆ ಆ ಮೊದಲು ಇದ್ದ ಹುಡುಗರನ್ನ ಸೇರಿಸಿಕೊಂಡು, ಈಗ ಕಂಪನಿಯಲ್ಲಿ ೧೫ ಜನ ಇದ್ದಿವಿ. ಈ ಎರಡು ವರ್ಷದಲ್ಲಿ, ಕೆಲಸ ಯಾವಾಗಲೂ ಇದ್ದೆ ಇತ್ತು. (ಈಗಲೂ ಇದೆ, ಇನ್ನೂ ಸುಮಾರು ಕಾಲ ಇದ್ದೆ ಇರುತ್ತದೆ). ಇದೆಲ್ಲಾ ಯಾಕೆ ಹೇಳಿದೆ ಅಂದ್ರೆ, ನನಗೆ ಒಂದು ವಾರ ರಜಾ ಕೊಟ್ಟು, ಈ ವಾರ ಸುಮ್ಮನೆ ಮನೆಯಲ್ಲೆ ಇರು ಅಂತ ಹೇಳಿದ್ರೆ ಬಹುಷಃ ಬಹಳ ಕಷ್ಟ ಆಗುತ್ತೆ.

"ಅಲ್ದಪ! ಬರಿ ಕೆಲ್ಸ ಒಂದೆ ಮಾಡಕ್ಕೆ ಬೇಜಾರು ಬತಲ್ಯಾ?", ಜನ ಕೆಳ್ತಾನೆ ಇರ್ತ ನನ್ನ. ಹೌದು, ಬರಿ ಕೆಲಸ ಒಂದೆ ಮಾಡ್ಲಿಕ್ಕೆ ಕಷ್ಟ. ಅದಕ್ಕೆ ನಾನು ಒಂಟಿತನ ಕಾಡ ಬಾರದು ಅಂತೇಳಿ, ಇಲ್ಲೆ ಇರೊ gymಗೆ ಹೊಗ್ತಿ. ಟೊರೆಂಟ್ ಇಂದ ಮೂವಿ ಡೌನ್ಲೊಡ್ ಮಾಡಿ ನೊಡ್ತಿ, youtube ಇಂದ ಸಾಲ್ಸ steps ನೋಡಿ ಕಲಿತಿದ್ದಿ. tennis ಮ್ಯಾಚ್ ಇದ್ರೆ ನೊಡ್ತಿ. ಪುಸ್ತಕ ಒದ್ತಾ ಇರ್ತಿ. skate board ಒಂದು ಸುಮಾರು ಚೆನಾಗೆ ಕಲ್ತಿದ್ದಿ. i am happy :D but is this enough?

ಹೌದು! ಏನೊ ಒಂದು ಕೊರತೆ ಕಾಡುತ್ತೆ. ವಯಸ್ಸು ಬಡ್ಡಿಮಗಂದು, ಮನಸ್ಸು ಏನೇನೊ ಬಯಸುತ್ತೆ. ಬೇಜಾರಾದಾಗ ಗಂಟೆಗಟ್ಟಲೆ ಮಾತಾಡಲು ಇನ್ನೊಂದು ಜೀವದ ನಿರೀಕ್ಷೆ. ಆದರೆ ನನಗೆ ಗೊತ್ತು, ಈ ಒಂದು ವಿಷಯವಾಗಿ ನಾನೆ ಇನ್ನು ತಯಾರಿಲ್ಲ.. ಇನ್ನೆರಡು ವರ್ಷಗಳಲ್ಲಿ ಕೈಲಿ ಸ್ವಲ್ಪ ದುಡ್ಡುಮಾಡಿ, ಬಾರತಕ್ಕೆ ಬಂದ್ರೆ ಅಗ ಈ ಬಗ್ಗೆ ಯೋಚಿಸೋಣ.

ಸೋಮವಾರ, ಮೇ 26, 2008

ಯೆಮ್ಮನಾಡಗೆ ಅರಳಿದ ಕಮಲ

ಅಂತೂ ಇಂತು ಕರುನಾಡ ಚುನಾವಣೆ ಮುಗ್ದು, ಪಲಿತಾಂಶ ಎಲ್ಲರಿಗುವ ಗೊತಾಗಿ ಹೊತು. ಎಮ್ ಪಕ್ಕದ್ದೂರವ್ರೆ ಆದ ಯೆಡ್ಡ್ಯೂರಪ್ಪ ಮುಖ್ಯಮಂತ್ರಿ ಆಗೊದು ಖಚಿತ. ಬರಿ 3 ಜನರನ್ನ ಹೊರ್ಗಿಂದ ಎಳ್ಕಳಕ್ಕು. ಅದೂ ಗಟ್ಟಿಮಾಡಿದ್ವಡ. ಒಟ್ಟಾರೆ ಇನೈದು ವರ್ಷ ಎಮ್ ಕಂದಾಯೆಲ್ಲ ಸರಿ ಉಪ್ಯೋಗ ಆಗ್ತೇನ ಹೇಳಿ ಒಂಚೂರು ಆಸೆ. ವಿಚಾರೆಂತು ಕೇಳಿರೆ, ಎಮ್ ಜಾತ್ಯಾತೀತ ಭಾರತದ ಕೆಲವೊಂದು ದೂರದರ್ಶನ ಚಾನಲ್ಲೊರು ಜಾತಿವಾರು ಸಚಿವರ ಪಟ್ಟಿ ಬಿತ್ತರ್ಸ್ತ ಇದ್ವಡ :o ಇಷ್ಟೆಲ್ಲ ವರ್ಷ ಎಲ್ಲಾತ ಅಲ್ಲಿ ಬೆಳ್ದು, ಬೇರ್ಬೇರೆ ಊರಗೆ ಇದ್ದು, ಎಂಗೆ ಜಾತಿನೆ ಇಲ್ಲೆ ಅಂತ ಅಂದ್ಕಂಡು, ಹಂಗೆ ಬದ್ಕಣ ಹೇಳಿರು ಜನ ಬಿಡ್ತ್ವಲ್ಲೆ, ನೀ ಬ್ರಾಹ್ಮಣ, ನೀ ಹವ್ಯಕ ಅಂತ ನೆನ್ಪು ಮಾಡ್ಸನೆ ಇರ್ತ. ಯಾವತ್ತಿಗೆ ನಮ್ಮ ಸರ್ಕಾರಿ ಅರ್ಜಿಗಳಲ್ಲಿ ಜಾತಿ ಅನ್ನೊದು ತೆಗಿಯಕ್ಕೆ ಸಾದ್ಯನೊ ಗೊತ್ತಿಲ್ಲೆ. ವಾರ್ತಾ ಕೊಂಡಿಗಳನ್ನ ಒದಿರೆ ಯಾರೊ ಗುಜ್ಜಾರ್ ಹೇಳ ಜನ್ವಡ, ಅವ್ರ ಜಾತಿನ ಹಿಂದುಳಿದ ಜಾತಿ ಪಟ್ಟಿಗೆ ಸೆರ್ಸಕ್ಕು ಹೇಳಿ ಕಂಡಲ್ಲೆಲ್ಲ ಬೆಂಕಿ ಹಚ್ಚ್ತಾ ಇದ್ವಡ. ಹೌದು ತಗ, ತೀರ ಈ ತರ ಮಾಡೊರು ಹಿಂದುಳಿದ ಜನ ಅಂತ ಹೇಳ್ಲಕ್ಕು. ತೀರ ನಮ್ ದೇಶದಗೆ ಮಾತ್ರನೇನ, ನನ್ನ ಕೆಲ್ಸ ಬೇರೆಯೊರು ಮಾಡ್ಕೊಡಕ್ಕು, ಎನ್ ಕೈಲಿ ಹರಿತಲ್ಲೆ ಅಂತ ಹೇಳದು. ಹೇಳಕ್ಕೊದ್ರೆ ಮಹಾಭಾರತ ಆಗೊಗ್ತು, ಚಾಪೆ ಹಾಸಿ, ಕೈಲಿ ಲೋಟ ಹಿಡ್ಕಂಡು ಇನ್ನೊಂದಿನ ಮಾತಾಡಣ.

ಭಾಜಾಪ ನನಗೆ ಮೊದಲಿಂದ ಇಷ್ಟವಾದ ಪಕ್ಷ, ಈಗ ಅದಿಕಾರ ಸಿಕ್ಕಿದ್ದು, ಹೆಂಗೆ ಆಡಳಿತ ನೆಡ್ಸ್ತ ನೋಡಣ. ರಾಜ್ಯ ಭಾಜಾಪದ ಸರ್ವರಿಗೂ ಶುಭಾಶಯಗಳು.

ಶುಕ್ರವಾರ, ಮೇ 9, 2008

ಕ್ಷಮಿಸಿ ಬಿಡಮ್ಮ

ಬಂಧನ(bonding)! ನಂಟು(relate)! ಈ ಎರಡು ಶಬ್ದಗಳಿಂದ ಕನ್ನಡದಲ್ಲಿ ಬಹುತೇಕ ಪದಗಳು ಹುಟ್ಟಿಕೊಂಡಿವೆ. ಏನೇನು ಶಬ್ದಗಳು ಇರಬಹುದು ಅಂತ ಯೊಚಿಸ್ತ ಹೋದೆ, ಸಂಭಂಧ, ಬಂದು, ಭಾಂದವ್ಯ, ನೆಂಟ,ನೆಂಟಸ್ತಿಕೆ, ಇತ್ಯಾದಿ, ಇತ್ಯಾದಿ. "ಹೌದು, ಯಾಕಪ್ಪ ಇವೆಲ್ಲ ನೆನ್ಪಾಯ್ತು ನಿಂಗೆ" ಅಂತ ನೀವು ಕೇಳ್ಬೋದು. ಈ ಪದಗಳ ಬಗ್ಗೆ ನಾನು ಸುಮಾರಷ್ಟೆ ಯೋಚ್ನೆ ಮಾಡ್ತಾ ಇರ್ತಿನಿ. "ಅಪ್ಪಿ, ತಲಿಗೆ ಹಚ್ಚಕಳ್ಳಡ" ಅಂತ ನಿಂಗ ಹೇಳ್ತಿ ಅಂತ ನಂಗೆ ಗೊತಿದು. ಅದ್ರು ನಾ ಯೆಂತಕ್ಕೆ ಈ ವಿಚಾರಗಳ ಬಗ್ಗೆ ಯೋಚ್ನೆ ಮಾಡ್ತ್ನಪ್ಪ ಅಂದ್ರೆ, ನನ್ನಲ್ಲಿ ಆ 'ಬಂದನ' ಅನ್ನ ಬಾವನೆ ಕಡ್ಮೆ. ನನ್ನ ಮಂತ್ರ ಅದು, 'life moves on', ಹಂಗಂತ, ನನ್ನ ನಂಟು ಎಲ್ಲಿದು ಅಂದ್ರೆ, ಹೇಳದು ಸುಮಾರಷ್ಟೆ ಕಷ್ಟ. ಹುಟ್ಟಿದ್ದು ಮಲೆನಾಡಮಡಿಲ ಹವ್ಯಕ ಒಟ್ಟುಸಂಸಾರದಲ್ಲಿ. ಹತ್ತು ವರ್ಷಗಳ ನಂತರ ನವೋದಯ ವಿದ್ಯಾಲಯದಲ್ಲಿ ಜೀವನ. ಅಲ್ಲಿ 7 ವರ್ಷಗಳು ಕಳೆದ ನಂತರ 4 ವರ್ಷಗಳು ಮೈಸೂರಿನಲ್ಲಿ ಕಂಪ್ಯೂಟರ್ ತಾಂತ್ರಿಕ ವಿದ್ಯಾಭ್ಯಾಸ. ನಂತರದಲ್ಲಿ, 4 ವರ್ಷಗಳು ನಮ್ಮ ಬೆಂಗಳೂರು ಮಹಾನಗರಿಯಲ್ಲಿ. ಒಟ್ಟಾರೆ ಯೆನ್ ಭಾಷೆ ಕುಲ್ಗೆಟ್ ಹೊಗೈತ್ರಿ. ಒಂದಾ ಮಾತ್ ಹೇಳ್ ಬೇಕಂದ್ರ, ನಾನೊಬ್ಬ ಕನ್ನಡಿಗ. ಹೆಂಗಂದ್ರೂ ಬೇರೆ ಭಾಷೆ ಬರಲ್ಲ, ಅದ್ರಲ್ಲೂ ಈ ಬಡ್ಡಿಮಗಂದು ಇಂಗ್ಳಿಶು, ಮಾತಾಡಕ್ಕೆ ಬತಲ್ಯಪ. ಬರೆಯಕ್ಕೆ 'spell checkers' ಇದ್ದ, ಅಡ್ಡಿಲ್ಲೆ. ಇಲ್ದೆ ಹೊಗಿದ್ರೆ, ಕಥ್ಯಾ? ಪುಣ್ಯ ಮಾರಾಯ, BE ಮಾಡಿದ್ದಿ ಬಚಾವು, ಪಾಸಾರು ಆದಿ, ಇಲ್ದೆ ಹೊಗಿದ್ರೆ, ಊರಗೆ ತೋಟ ನೋಡ್ಕ್ಯೋತ, ಕೊಟ್ಗೆಲಿ ಎಮ್ಮೆ ಮೈ ತೊಳ್ಸ್ಗ್ಯೊತ, ಇರಕಿತ್ತು. ಹಂಗಂತ, ಊರಗೆ ಅದನ್ನ ಮಾಡದು ತಪ್ಪಾ ಕೇಳಿರೆ ತಪ್ಪಲ್ಲ. ಯೆಂಗೆ ಮೈಗಳ್ತನ ಸಣ್ಣಕಿದ್ದಾಲಿಂದನೆ ಬಯಿಂದು. ಅದ್ಕೆ ಸುಮಾರೆ ಕಷ್ಟಾಗ್ತಿತ್ತು ಹೇಳಿ ವಿಚಾರ.

"ಇಷ್ಟೆ ವಿಚಾರಾಗಿದ್ರೆ ಇಲ್ಲಿ ಒದ್ದಾಡ್ಕೊತ ಬರ್ಯದು ಯೆಂತಿತ್ತು? ಮಳ್ಳಪ" ಹೇಳಿ ನಿಂಗ ಮಾತಾಡ್ಕ್ಯತ್ತಿ, ನಂಗೊತ್ತಿಲ್ಯನ ಅಪ್ಪಿ. ಇಲ್ಕೇಳಿಲ್ಲಿ. ಬರಿ ಕನ್ನಡ ಒಂದೆ ಬರದು ನಂಗೆ ಅನ್ಕಂಡು, ಅಮೇರಿಕಕ್ಕೆ ಬಂದ್ರೆ, ಯೆನ್ನ ಬಾಸು ವಿಮಾನನಿಲ್ದಾಣದಗೆ ಸಿಕ್ಕಿದವ್ನೆ, "ಹೆಯ್! ಕೈಸೆ ಹೊ?" ಅಂತ ಕೇಳಕ್ಕಾ? ಹೊಗ್ಲಿ. ಅವ್ರ ಮನೆ ಆತು, ಎಲ್ಲರು ಹಿಂದಿ ಮಾತಾಡ್ತ, ಅವ್ರ ಜೊತೆಗೆ, ಅಲ್ಲಿ ಇಲ್ಲಿ ಸಿನೆಮಾ ನೋಡಿ ಕಲ್ತ್ಗಂಡಿದ್ ಹಿಂದಿಲಿ ಮಾತಾಡಿ ಕಳತ್ತು. ಇಲ್ಲಿ DL ತಗಳಣ ಅಂತ driving class ಗೆ ಸೇರಣ ಅಂತ ಪೊನ್ ಹಚ್ಚಿರೆ, "hello! driving school. Kevin here", ಅಂತ ಉತ್ರ. ಎಲ್ಲ ಆತು, ಶುರು ಮಾಡಣ ಅಂತ ಕ್ಲಾಸ್ಗೆ ಹೊದ್ರೆ, ಅಲ್ಲಿ ನಮ್ಮ 'ಕರಣ್ ಬಾಯಿ' ಕಲ್ಸದು. ಅವನ್ ಪ್ರಕಾರ ಯೆಂಗೆ ಡೆಲ್ಲಿನಡ :ಓ ನನ್ನ ಹಿಂದಿ ನೊಡಿರೆ ಚೆನಾಗೆ ಬತ್ತು ಹೇಳ್ತ್ನಪ್ಪ ಅವ. ಸರಿ, ಎಮ್ ಬಾಸ್ ಮನೆಲಿ ಕೆಲ್ಸಕ್ಕೆ ಹೇಳಿ ಬರವ್ಳು mexican ಅಂತ ಗೊತಾತು. ಅವ್ಳಿಗೆ 'ಹೊಲಾ! ಕೊಮೊ ಎಸ್ತಾಸ್?' ಅಂತ ಕೇಳಿರೆ ಅವ್ಳು ಎನ್ನ ಲ್ಯಾಟಿನೊ (ಹೊಯ್! ಲಾಟೀನು ಅಲ್ಲ, ಹಂಗಂತ ಇಂಗ್ಲಿಶಗೆ ಹೇಳಿರೆ, ದಕ್ಷಿಣ ಅಮೇರಿಕದವ ಅಂತ) ಅಂದ್ಕ ಬಿಟ್ಳಡ. 'ಬಿಯೆನ್ ಸೆನ್ಯೋರ್! ಇ ತು?' ಉತ್ರ. ನಾ ಹೆದ್ರಲ್ಲೆ. 'ಬಿಯೆನ್ ಬಿಯೆನ್! ಗ್ರಸಿಯಾಸ್' ಅಂದಿ. ವಿಚಾರ ಯೆಂತಪ್ಪ ಅಂದ್ರೆ, ಸ್ಪಾನಿಷ್ ಚೂರುಪಾರು ಬತ್ತು. ಉಪ್ಯೊಗ್ಸನ ಅಂತ. ಕೆಲ್ಸ್ ದವ್ಳಿಗೆ ಮಗ್ಳಿದ್ರೆ ಉಪ್ಯೊಗಕ್ಕೆ ಬತ್ತೇನ ಹೇಳಿ.

ಮುಖ್ಯ ವಿಚಾರ ಯೆತ್ಲೆತ್ಲಗೊ ಹೊತು. ಸರಿ, ಇಪ್ಪತ್ತು ಸಾವ್ರ ಮೈಲಿ ದೂರ ಬಂದಾಗ ನಾನು ಭಾರತೀಯ ಅನ್ಸ್ತು. ಯೆಂತಾರು ಹೇಳಿ. ಎಂಗೆ, ತಲೆಲಿ, ಹೃದಯದಗೆ, ರಕ್ತದಗೆ ಬರದು ಕನ್ನಡ ಒಂದೆ.

ಮೇಲಿಂದೆಲ್ಲಾ ಒದಿ ಆತಾ? ಯೆಂತ ಅನ್ಸ್ತು? ವಿಚಾರ ಇದಲ್ಲ. ಇದೆಲ್ಲಾ ಪೀಠಿಕೆ. ಮುಂದೆ ಬರಿಯೊದು ನಿಜವಿಚಾರ. ಮೇಲಿನ ವಿಚಾರಗಳನ್ನ ಒದಿದ್ರೆ ಒಂದು ಸಾಮಾನ್ಯ ಪದ ಜ್ಞಾಪಕಕ್ಕೆ ಬತ್ತಾ? ಅದು 'ಮಾತೃ', ಮಾತೃಭಾಷೆ, ಮಾತೃಭೂಮಿ, ಮಾತೃಸಂಸೃತಿ, ಇಲ್ಲೆಲ್ಲ ಇರೊದು ಒಂದೆ ಪದ 'ಅಮ್ಮ' ಅಥವಾ 'ಮಾತೆ'. ಮೊದಲೆ ಹೇಳಿದಂತೆ, ನಂಟು, ಬಂದನ, ಯೆಲ್ಲವು ಶುರು ಆಗೋದು ಅಮ್ಮನಿಂದಲೆ. ಎಲ್ಲೆ ಇರಲಿ, ಏನೆ ಮಾಡ್ಲಿ, 'ಅಮ್ಮ' ಅನ್ನೊ ಒಂದು ಬಾವನೆನ ಬದಲಾಯಿಸಲು ಸಾದ್ಯನೆ ಇಲ್ಲ. ನನ್ನ ಮಟ್ಟಿಗೆ ಹೇಳೊದಾದ್ರೆ, ನಾನು ಇಂದು ಏನಾಗಿದಿನೋ, ಮುಂದೇನಾಗ್ತಿನೊ, ಎಲ್ಲವು ನನ್ನಮ್ಮನಿಂದಲೆ. 'I miss you mom'. ಹೌದು, ಅಮ್ಮ ಮುಖ್ಯ ಅಂತ ನಾವು ಯೊಚಿಸೊದೆ ಇಲ್ಲ ಕೆಲವೊಮ್ಮೆ, ಯಾಕೆಂದ್ರೆ, 'ಅಮ್ಮ' ಅನ್ನೊ ಶಬ್ದ ಒಂದು ಸಹಜತೆ. ಅದು ಒಂದು ತರ ಬೆಚ್ಚನೆಯ ನಂಬಿಕೆ ಕೊಡುತ್ತೆ, ನನ್ನ ಏಳ್ಗೆಗೆ, ನನ್ನ ಜೇವನದ ಬಗ್ಗೆ ಒಂದು ಜೀವ ಬೇಡ್ತಾ ಇದೆ ಅನ್ನೊ ಒಂದು ನಂಬಿಕೆ. ಅಮ್ಮನಿಂದ ದೂರ ಬಂದು ಏನು ಸಾದನೆ ಮಾಡ್ತಾ ಇದಿನಿ ಅನ್ನೊ ಬಾವನೆ ಕೆಲವೊಮ್ಮೆ ಕಾಡುತ್ತೆ, ಆದರೆ, ನನ್ನಮ್ಮ ನನ್ನ 'ಬಂದನ'ಕ್ಕೆ ಒಳಪಡಿಸಿಲ್ಲ, ನಂಟಿದೆ. ಗಾಡ ನಂಟು. ಅಮ್ಮನ ದಿನದ ಈ ವಾರದಲ್ಲಿ, ಅಮ್ಮ, ನನ್ನ ಜೀವನದಲ್ಲಿ, ನಿನ್ನ ಮಹತ್ವದ ಬಗ್ಗೆ ನೆನ್ಸ್ಕೊಂಡ್ರೆ ಯೋಚನೆಗಳು ದಿಕ್ಕು ತಪ್ಪುತ್ತೆ, ಎದೆ ಬಡಿತ ಏರುಪೇರಾಗುತ್ತೆ. ಇಷ್ಟು ವರ್ಷದಲ್ಲಿ ಒಂದೆ ಒಂದು ಕಡೆ ನೀನು 'ಬೇಡ' ಅಂದಿದ್ರೆ ನನ್ನ ಜೀವನದ ದೆಸೆ ಬೆರೆಡೆ ಇರುತ್ತಿತ್ತು.
You are a perfect mother. May not be the one who took care of me so much that I never went out of your site, but surely the one who shaped my life, beautifully, to be precise. People say I am lucky, But I know, that I am lucky because you are my mother. Mom, I love you.

"ಆ ದಿನಗಳು", ಎಲ್ಲರ ಮನಸಿನಲ್ಲೂ ಒಂದಲ್ಲ ಒಂದು ಖುಷಿಕೊಡುವ ಶಬ್ದ. ಅಮ್ಮನ ವಿಚಾರವಾಗಿ ನೆನಸಿಕೊಂಡಾಗ, ತಲೆತುಂಬಾ ಇರುವ ವಿಚಾರಗಳು, ನಗೆ, ದುಃಖ, ಕಣ್ಣೀರು, ಎಲ್ಲವನ್ನೂ ಒಟ್ಟಿಗೆ ಮನಕ್ಕೆ ತರುತ್ತದೆ. ಸಣ್ಣವನಿರುವಾಗ ತಪ್ಪು ಮಾಡಿದಾಗ, ಹೊಡಿಯದೆ, ಬರಿ ಬುದ್ದಿವಾದ ಹೇಳಿ, "ಇವಂಗೆಂತಕ್ಕೆ ಎಷ್ಟೆಳಿದ್ರು ಅರ್ಥಾಗ್ತಲ್ಯಪ" ಹೇಳ್ಕೊತ ಕಣ್ಣಗೆ ನೀರು ತಂದ್ಕೊತ ಇದ್ದಿದ್ದು, ಬಿದ್ದು ಕಾಲು ಮುರಿದು ಕೊಂಡಾಗ ನನ್ನ ಶುಶೃಷೆ ಮಾಡಿದ್ದು. 7 ವರ್ಷಗಳು ನಾನು ನವೋದಯದಲ್ಲಿ ಇದ್ದಾಗ, ತಿಂಗಳ ಮೊದಲ ಭಾನುವಾರ, ಬೆಳ್ಬೆಳಿಗ್ಗೆ 4ಗಂಟೆಗೆ ಯೆದ್ದು, ತಿಂಡಿ ಕಟ್ಕಂಡು, ಹೆಚ್ಚುಕಡ್ಮೆ ನೂರು ಕಿಲೋಮಿಟೆರ್ ದೂರದ ಗಾಜನೂರಿಗೆ ಗಂಟೆಗಟ್ಟಲೆ ಬಸ್ ಕಾದು, ಒಜ್ಜೆ ಚೀಲ ಹೊತ್ಗಂಡು, ನನ್ನ/ಅಕ್ಕನ್ನ ನೋಡಕ್ಕೆ ಬರಕ್ಕೆ ನೀನು ಎಷ್ಟು ಕಷ್ಟಪಟ್ಟಿದ್ದೆ, ಅಲ್ಲಿಗೆ ಬಂದಕೂಡ್ಲೆ, ನಾನು ಬರಿ ತಿಂಡಿ ಚೀಲ ಒಂದು ತಗಂಡು, "ಅರಾಮಿದ್ಯಾ?" ಹೇಳೂ ಕೇಳ್ದೆ ಇರ್ತಿದ್ದು, ಮನೆಲಿರೊ ಹಣಕಾಸಿನ ಕಷ್ಟ ನನ್ನ ವಿಧ್ಯಾಭ್ಯಾಸಕ್ಕೆ ತೊಂದ್ರೆ ಮಾಡ್ಲಾಗ ಅಂತ, ನೀನು ಎಷ್ಟೆ ಕಷ್ಟಪಟ್ಟರೂ ಅಡ್ಡಿಲ್ಲೆ, ನಾನು ಮಾತ್ರ ಓದು ಮುಗ್ಸಕ್ಕು ಅಂತ ದೃಡನಿರ್ದಾರ ಮಾಡಿ ನನ್ನ ಓದ್ಸಿದ್ದು. ಆಮೇಲೆ ನಂಗೆ ಕೆಲ್ಸ ಸಿಕ್ಕಿದ್ ಮೇಲೆ, ಕೈಲಿ ದುಡ್ಡಿದ್ರೂ ಅಂಗಡಿಗೆ ಕರ್ಕೊಂಡು ಹೋಗಕ್ಕೆ ನಂಗೆ ಟೈಂ ಇಲ್ಲೆ ಅಂತ ನಾ ಹೇಳಿದ್ರೂ, ಒಂದು ದಿನನೂ ನನ್ನ ಮೇಲೆ ಸಿಟ್ಟು ಮಾಡ್ಕೊಳ್ದೆ, ಅಮ್ಮ, ನಿನ್ನ ತಾಳ್ಮೆ, ನಿನಗೆ ನಾನು ಕೊಟ್ಟ ದುಃಖ, ಒಟ್ಟಾರೆ ನಾನು ಈಗ ನನ್ನ ಲ್ಯಾಪ್ಟಾಪ್ನ ಪರದೆ ಮಬ್ಬಾಗಿದೆ. ಒಹ್! ಅದು ನನ್ನ ಕಣ್ಣೀರಿನಿಂದ ನಿನಗೆ ಹೇಳ್ಬೆಕಾಗಿಲ್ಲ ಅಲ್ವಾ? ನನಗೆ ಗೊತ್ತು, ನಾನು ಅಲ್ಲಿದ್ದಾಗ ನಿನಗೆ ನನ್ನ ಸಮಯದಲ್ಲೆ ಸಲ್ಲಬೇಕಾದ ಪಾಲು ಕೊಟ್ಟಿಲ್ಲ ಅಂತ, ಕ್ಷಮಿಸಮ್ಮ. ಆದರೆ ನನಗೆ ಗೊತ್ತು, ನನ್ನ ಮನಸಾರೆ ನಿನಗೆ ಹೇಳುತಿದ್ದೇನೆ, ನನ್ನ ಸಮಯದ ಪಾಲನ್ನ ನಿನಗೆ ಮೀಸಲಿಡುತ್ತೆನೆ.

ನನಗೆ ಈಗ ಅರ್ಥವಾಗ್ತಾ ಇದೆ, ಜನಕ್ಕೆ ಯಾಕೆ 'ಅಮ್ಮನ ದಿನ', 'ಅಪ್ಪನ ದಿನ', 'ಮಕ್ಕಳ ದಿನ', 'ಅಕ್ಕನ ದಿನ', 'ಗೆಳೆಯರ ವಾರ' ಗಳು ಬೇಕು ಅಂತ. ಬಹುತೇಕ ಜನ ಕೆಲಸ, ಅದುಇದು ಅಂತ, ತಮ್ಮನ್ನ ತಾವೆ ಮರೆತಿರುತ್ತಾರೆ, ಅವರಿಗೆ ಇಂಥ ದಿನಗಳು ಬೇಕು. ಈ ಮೊದಲು ನನ್ನ ಪ್ರಕಾರ ಆ ತರಹದ ಜನ ಕಡ್ಮೆ, ಆದ್ರೆ ಈಗ, ನಾನೆ ಅವರಲ್ಲಿ ಒಬ್ಬ, ಮತ್ತು ಈ ತರಹದ ಜನರು ತುಂಬಾ ಇದ್ದಾರೆ ಎಂದು ಅರಿವಾಗಿದೆ. ನಮ್ಮನ್ನು ಇಷ್ಟ ಪಡುವವರನ್ನು ವರ್ಷದಲ್ಲಿ ಒಮ್ಮೆನಾದ್ರೂ ನೆನ್ಪಸ್ಕೋ ಬೇಕು.

ಅಮ್ಮಾ, ಈ ಲೇಖನ ನಿನಗೆ ಸಮರ್ಪಣೆ.

ಮಂಗಳವಾರ, ಮೇ 6, 2008

ಅತಿ ಆಸೆ ಗತಿಗೇಡು

ಇವತ್ತು ನಾನು, ಪ್ರಸಾದ್ ಹೆಗಡೆ ಲೋಕಾರೂಡಿ ಇ-ಹರಟೆ ಹೊಡಿತಾ ಇದ್ದಿದ್ಯ. ಮಾತಾಡ್ತ, ಮಾತಾಡ್ತ ಮದುವೆ, ಜೀವನ ಅಂತ ವಿಚಾರ ಬಂತು. ನಂಗ್ಳಿಬ್ರ ಯೋಚ್ನೆನು ಸುಮಾರು ಒಂದೆ ತರ ಇತ್ತು. ಅದಕ್ಕೆ, ನಂಗ ಇಬ್ರೆ ಈ ತರ ಯೋಚ್ನೆ ಮಾಡದ, ಅಥ್ವ ನಿಂಗನೂ ಯಾರಾದ್ರು ಹಿಂಗೆ ಯೋಚ್ನೆ ಮಾಡ್ತ್ರ ಹೇಳಿ ಕೇಳಕ್ಕಿತ್ತು.

ಹೌದು, ಅವತ್ತು ಎನ್ನ ಗೆಳ್ತಿ ಒಬ್ಳು ಹೇಳಿದಂಗೆ ಎನ್ನ ಆಸೆ ಸ್ವಲ್ಪ ಹೆಚ್ಚ್ಗೆನೆ ಇದ್ದು. ಹುಡ್ಗಿ ಚೆನಾಗಿರಕ್ಕು, ಸ್ವಂತಕ್ಕೆ ನಿರ್ದಾರ ತಗಳ ಹಂಗೆ ಇರಕ್ಕು, ಪುಸ್ತ್ಕ, ತಿರ್ಗಾಟ ಅಂದ್ರೆ ಇಷ್ಟ ಇರಕ್ಕು, ಅಡ್ಗೆ ಮಾಡಕ್ಕೆ ಬರಕ್ಕು, ಹೇಳ್ತಾ ಹೊದ್ರೆ ಪುಸ್ತ್ಕ ಬರಿಲಕ್ಕು. ಅಲ್ಲ, ನಿಂಗನೆ ಹೇಳಿ, ಎನ್ನ ಗುರಿ ಎತ್ರಕ್ಕೆ ಇಟ್ರೆ ತಪ್ಪಾ? ಹಂಗಂತ ಎನ್ಗಂತೂ ಎಂತ ಗಡಿಬಿಡಿ ಇಲ್ಲೆ. ದಿನ, ಹೊಗ್ಲಿ, ವರ್ಷನೆ ಬಾಕಿ ಇದ್ದು. ಆದ್ರು ಒಂದು ಪ್ರಶ್ನೆ ಮಾತ್ರ ಉತ್ತ್ರಿಲ್ದೆ ಉಳ್ದೊಗ್ತು ಹೇಳಿ ಬೇಜಾರು.

ಹೊಗ್ಲಿ, ಅಪ್ಪಿತಪ್ಪಿ ಅಲ್ಲಿಇಲ್ಲಿ ಒಬ್ಬೊಬ್ರು ಹುಡ್ಗಿರು ಇಷ್ಟ ಆದ್ರೂ, ಅವ್ರಿಗೆ ಮದ್ವೆ ಆಗಿರ್ತು ಅಥ್ವ, ಮಾಣಿ ನಿಶ್ಚಯ ಮಾಡ್ಕಂಡಿರ್ತ. ಒಟ್ಟಾರೆ, ಯೆಂಥೊ ಸರಿ ಇಲ್ಲೆ :(

ಕೆಲ್ವೊಮ್ಮೆ, ಗಿರಿ ಭಾವಯ್ಯನ status ನೆನ್ಪಾಗ್ತು. 'If you aim at nothing, you hit everytime' ಆ ತರ ಯೋಚ್ನೆ ಮಾಡಿದ್ರೆ, ಯೆಲ್ಲಾ ಹುಡ್ಗಿರೂ ಇಷ್ಟ ಆಯಕ್ಕು. ಆದ್ರೆ, ಎನ್ನ ಜಾಯ್ಮಾನ ಅಲ್ಲ ತಗ ಅದು. ಎನ್ನ ಗುರಿ ಯಾವಾಗ್ಲೂ ಮೇಲೆಯ. ನಾ ಶುರು ಮಾಡದೆ ಆಗೆ ಆಗ್ತು ಹೇಳ್ಕ್ಯೊತ. ಯೆಂತಾರು ಆಗ್ಲಿ. ಗುರಿ ಮುಟ್ತಿ ಹೇಳಿ ನಂಬ್ಕೆ.

ಹೊಯ್! ಅಮ್ಮಿ, ನೀ ಯೆಂತಾರು ಇದನ್ನ ಒದಿದ್ರೆ, ಬೇಜಾರಾಗಡ, ನೀ ಯೆಂಗೆ ಇಷ್ಟ ಆಗ್ದೆ ಇರಕ್ಕೆ ಸುಮಾರು ಕಾರಣ ಇದ್ದಿಕ್ಕು. ಗೊತಿದಲ, ನಾ ಒಂತರ ಹುಚ್ಚ ಮೊದ್ಲೆ. ಬೊಷ ನಾನು ನೀನು ತೀರ ಇಷ್ಟ ಆಗ ಅಷ್ಟು ಒಟ್ಟಿಗೆ ಒಡಾಡಲ್ಲೆ ತಗ. :| ನೋಡಣ, ಸದ್ಯಕ್ಕಂತು ಆನು ಸಿಕ್ಕಾಪಟ್ಟೆ ಕೆಲ್ಸ ಮಾಡಣ ಅಂತ ತೀರ್ಮಾನ ತಗಂಡು ಆಯ್ದು. ಇನ್ನೊಂದು ೨-೩ ವರ್ಷದಗೆ ಕೋಟ್ಯಾಧೀಶ ಆಪ ಅಂದಾಜಿದ್ದು ಯೆಂಗೆ. ದುಡ್ಡಿದ್ರಾರು ತಲೆ ಇರೊ ಹುಡ್ಗಿ ಸಿಗ್ತಾಳ ನೋಡಕ್ಕು. (ನೀವು ತಲೆ ಇರೋ ಹುಡ್ಗಿ ಆಗಿದ್ರೆ, ಕ್ಷಮೆ ಇರಲಿ. mostly ನಿಮ್ಮನ್ನ ನಾನು ಬೇಟಿ ಆಗಿಲ್ಲ, ಅಥವಾ ನಿಮಗೆ ತಲೆ ಇದೆ ಅಂತ ನನಗೆ ಗೊತ್ತಾಗಿಲ್ಲ)

ಟಿಪ್ಪಣಿ: ಇದು ಯಾರದ್ದೆ ಮನಸಿಗೆ ನೋವಾಪಲೆ ಬರೆದ ಇ-ವಿಚಾರವಲ್ಲ. ನನ್ನ ಅನಿಸಿಕೆಗಳ ಬಗ್ಗೆ ತಮಗೆ ಅಸಮಾದಾನವಿದ್ದಲ್ಲಿ, ನನ್ನಲ್ಲಿ ನೇರವಾಗಿ ಅರಹಿಕೊಳ್ಳಬೇಕಾಗಿ ವಿನಂತಿ.

ಸೋಮವಾರ, ಏಪ್ರಿಲ್ 28, 2008

ಹಸಿವು ಮತ್ತು ಕಣ್ಣೀರಿನ ಸಂಭಂದ.

ಮೊನ್ನೆ ಮನೆಗೆ ಬಂದಾದ ಮೇಲೂ ಬರ್ತಿ ಕೆಲ್ಸ ಇತ್ತು. ಕೆಲ್ಸ ಮಾಡ್ತ ಮಾಡ್ತ, ರಾತ್ರೆ ಊಟ ಮಾಡಕ್ಕೆ ಮರ್ತು ಹೊತು. ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಏನೋ ಮರ್ತು ಹೊಯ್ದು ಹೇಳಿ ಗೊತಾತು. ಇನ್ನು ಸ್ವಲ್ಪ ಹೊತ್ತು ಕಳ್ದ್ ಮೇಲೆ ಊಟ ಮಾಡಕ್ಕೆ ಮರ್ತೊಯ್ದು ಹೇಳಿ ಅಂದಾಜಾತು. ನೊಡಿದ್ರೆ, fridge ನಲ್ಲಿ ಎಂತು ಇಲ್ಲೆ :( ಸರಿ, ಎಂಥಾರು ಆಗ್ಲಿ ಹೇಳಿ ಅನ್ನಕ್ಕಿಟ್ಟಿ. ಅವತ್ತು ಎಂಥಕೇನ ಗೊತ್ತಿಲ್ಲೆ, ಬರ್ತಿ ಹಸ್ವಾಗಿ ಹೊಗಿತ್ತು. ವಿಸ್ಯ ಗೊತಿದ? ಹಸ್ವಾದ್ರೆ ನಿದ್ದೆ ಬತಲೆ, ತಲೆ ಒಡ್ತಲ್ಲೆ, ಹೊಗ್ಲಿ ಸುಮ್ನೆ ಕುತ್ಕಳನ ಅಂದ್ರು ಆಗ್ತಲ್ಲೆ. ಅಯ್ಯೊ ರಾಮ! ಯಾರಿಗೂ ಬೇಡ ಆ ಕಥೆ. ಹಂಗೆ ಓಲೆ ಮೇಲೆ ಅನ್ನ ಕುದಿ ಬತ್ತಿದ್ದಂಗೆ ಹಸ್ವು ಇನ್ನು ಹೆಚ್ಚಾಗಕ್ಕೆ ಶುರು ಆತು.
ಈನ್ನೆರಡು ನಿಂಷಕ್ಕೆ ಅನ್ನ ಬೆಯ್ತು. ಎಂಗೆ ಹಸ್ವಾದಾಗ ತಲೆ ಓಡ್ತಲ್ಲೆ ಹೇಳಿ ಅನ್ಸಿದ್ದು ಬಿಸಿ ಬಿಸಿ ಅನ್ನ ನ ಹುಟ್ಟಗೆ ತಗಂಡು, ತಟ್ಟಿಗೆ ಹಾಕ್ಯಂಡು, ಪುಳಿಯೊಗ್ರೆ ಗೊಜ್ಜು ಸುರ್ಗಿ, ಕಲ್ಸನ ಅಂತ ಮುಟ್ಟಿದ್ರೆ, ಕೈ ಸುಟ್ಟೊಗಕ್ಕ? ಒಳ್ಳೆ ಕಥೆ ಆತಲ ಹೇಳ್ಕ್ಯೊತ, 'ಉಫ್! ಉಫ್!' ಉಬ್ಸ್ಕ್ಯೊತ, ಉಣ್ಣ ಹೊತ್ತಿಗೆ, ಕಣ್ಣಗೆಲ್ಲ ನೀರು :O
ಈ ಕಣ್ಣೀರು ಹಸ್ವು ತೀರಿದ್ದಕ್ಕೆ ಬರ್ತ ಇದ್ದಿದ್ದ, ಅಥ್ವ ಅಮ್ಮನ ನೆನಪ್ಸ್ಕೊಂಡು ಬಂದಿದ್ದ ಹೇಳಿ ಕೊನಿಗೂ ಗೊತ್ತೆ ಆಗಲ್ಲೆ :|

ಶುಕ್ರವಾರ, ಏಪ್ರಿಲ್ 25, 2008

ವಿಚಾರ - 1

"ಹೊಯ್! ಅರಾಮನೊ? ಕಾಣ್ದೆ ಬರ್ತಿ ದಿನ ಆತು. ಕೊನೆ ಕೊಯ್ಲೆಲ್ಲ ಆತ? ಅಪ್ಪಿ ಊರ್ ಕಡಿಗೆ ಬಂದಿದ್ನಾ? ಅರಾಮಿದ್ನಡ?" ಪ್ಯಾಟೆ ಕಡಿಗೆ ಹೊದ್ರೆ ಇದೆ ಥರ ಮಾತೆಯ. ಇತ್ತಿಚೆಗೆ "ಅಲ್ದೊ! ನಿಮ್ಮನೆ ಪಕ್ಕದ್ ಮನೆ ಕೂಸಿಂದು ಮದ್ವೆ ಡ್ಯೆವರ್ಸಿಗೆ ಬ್ಯಂದಡಲೊ? ಎಂತ ಕಥ್ಯಡ?" ಇಂಥವು ಸೆರ್ಕೈನ್ದ. ಯೊಚ್ನೆ ಮಾಡಿದ್ರೆ ತಲೆ ಓಡ್ತೆ ಇಲ್ಯಪ. ಇದೆಂಥಾ ತರ ಹೇಳಿ. ಇನ್ನೊಂದಿನ ಪೂರ ಕಥೆ ಹೇಳ್ತಿ, ಇವತ್ತು ಮನೆಲಿ ಪಾತ್ರೆಗಿತ್ರೆ ತೊಳಿಯೊ ಕೆಲ್ಸಿದ್ದು. ಬರ್ಲ? ಕೊನಿಗೆ ಸಿಗ್ತಿ

ಗುರುವಾರ, ಏಪ್ರಿಲ್ 17, 2008

his-story

ನಿನ್ನೆ ಎಮ್ ಭಾವಯ್ಯ ಕೇಳ್ತಿದ್ನ, ಉಂಡಾಡಿಗುಂಡ ಯಾರಾತ ಅಂಥ.. ಅದಕ್ಕೆ ಹೇಳಿ ಒಂದು ಪೀಠಿಕೆ ಹಾಕಕ್ಕಾತು. ಈ ಕಥಾನಾಯಕ ಎನ್ನ, ಅಂದ್ರೆ ಪಾಪಣ್ಣನ ಚಡ್ಡಿ ದೊಸ್ತ. ಶಾಲೆಗುವ ಒಟ್ಟೊಟಿಗೆ ಹೊಯ್ದ್ವಪ. ಆನು ಮಾತ್ರ ಹೆಸ್ರಿಗೆ ತಕ್ಕಂಗೆ ಇನ್ನು ಪಾಪ್ದವನಂಗೆ ಇದ್ದಿ. ಆದ್ರೆ ಎನ್ ದೊಸ್ತ ಸಣ್ಣಕ್ಕಿದ್ದಾಗ ಉಂಡಾಡಿಗುಂಡ (ಭಾವಾರ್ಥ: ಯಾವುದೆ ವಿಚಾರದ ಬಗ್ಗೆ ತಲೆಬಿಸಿ ಇಲ್ಲದೆ ಬದುಕುವವ) ಅಂತ ಅನ್ಸ್ಕಂಡು, ಈಗ್ ಸುಮಾರ್ ದೊಡ್ಡ್ ಮನುಷ್ ಆಗ್ಬಿಟಿದ್ನ. ಎಲ್ಲಾರು ಹಿಂಗೆ ಎಂಗ ಸಿಕ್ದಾಗ ಸುಮಾರು ವಿಷ್ಯ ಮಾತಾಡ್ತಿರ್ತ್ಯ. ಎಂಗೆ ಅದನ್ನ ನಿಮ್ಹತ್ರನು ಹೇಳನ ಅಂತನ್ಸಿ ಈ 'ಇ-ಪ್ರಲಾಪ'ದ ಉದ್ಭವ.