ಸೋಮವಾರ, ಜುಲೈ 21, 2008

ನನ್ನಜ್ಜ

ನನ್ನಜ್ಜ ಇನ್ನಿಲ್ಲ.. ಇಂದು ಬೆಳ್ಳಿಗ್ಗೆ ಎದ್ದ ಕೂಡಲೆ ಮೊದಲು ಸಿಕ್ಕಿದ್ದ ಸುದ್ದಿ ಇದು. ಸುದ್ದಿ ತಿಳಿದು ಸ್ವಲ್ಪ ಸಮಯವಾದರೂ ಯಾವುದೆ ಬಾವನೆಗಳಿಲ್ಲದೆ ಕುಳಿತಿದ್ದೆನೆ ನಾನು, ಇಪ್ಪತ್ತುಸಾವಿರ ಮೈಲು ದೂರದಲ್ಲಿ. ಗೌಡ ಯಾವಾಗಲು ನನಗೆ ಬೈಯುವುದು ನೆನಪಾಗುತ್ತೆ.. "inhuman ನೀನು" ಎಂದು. ಬಹುತೇಕ ನಿಜ. ನನ್ನ ಪ್ರಕಾರ ಸಾವು ಎಲ್ಲರಿಗೂ ಖಚಿತ. ಬಹುಷಃ ಮೂರು ದಿನದ ಹಿಂದೆ ಅಜ್ಜನಿಗೆ "brain hemorrhage" ಆಗಿದೆ ಎಂದು ಸುದ್ದಿ ಬಂದಾಗಲೆ ಈ ಬಾರಿ ಆಸ್ಪತ್ರೆಯಿಂದ ಹೊರಬರುವುದು ಅನುಮಾನ ಎಂಬ ಬಾವನೆ ಅಮ್ಮನ ದ್ವನಿಯಲ್ಲಿತ್ತು. ಅದರಿಂದಲೆ ಏನೋ, ಇಂದಿನ ಸುದ್ದಿ ಬರಸಿಡಿಲಿನಂತೆ ನನ್ನನ್ನು ಅಪ್ಪಳಿಸಲಿಲ್ಲ.

ಅಜ್ಜನಿಗೆ 86 ವರ್ಷ ವಯಸ್ಸಾಗಿತ್ತು, ಅವರ ಮೊದಲ ಮೊಮ್ಮಗ ನಾನು. (ನನ್ನ ಅಮ್ಮ ಅವರ ಹಿರಿಯ ಮಗಳು). ತುಂಬಾ ಇಷ್ಟ ನನ್ನನ್ನು ಕಂಡರೆ. ನಾನು ಸಣ್ಣವನಿರುವಾಗ, ಒಟ್ಟೊಟ್ಟಿಗೆ ಅಜ್ಜನ ಮನೆಯಲ್ಲಿ ಗೂಡು ಕಟ್ಟಿದ ಗುಬ್ಬಚ್ಚಿಗಳಿಗೆ ಅಕ್ಕಿ ಕಾಳು ಕೊಡುತ್ತಿದ್ದೆವು. ಅಜ್ಜ ದೇವಸ್ಥಾನದ ಪೂಜೆಗೆ ಹೊಗುವ ಮೊದಲು ತೀರ್ಥದಲ್ಲಿ ಒಮ್ಮೆ ಈಜಾಡಿ ಮಡಿಯಲ್ಲಿ ಗರ್ಭಗುಡಿ ಹೊಕ್ಕರೆ, ಪುಕ್ಕಲ ನಾನು, ನೀರು ಕಂಡರೆ ಹೆದರಿಕೆ, ಬರಿ ಕೈಕಾಲು ತೊಳೆದು, ಚಿಕ್ಕವ ಎಂಬ ರಿಯಾಯಿತಿ ಮೇಲೆ ಅಜ್ಜನೊಟ್ಟಿಗೆ ಹೊಗುತ್ತಿದ್ದೆ. ಆ ಸಮಯದಲ್ಲಿ ಅಜ್ಜನ ಮನೆಯಲ್ಲಿ ಎತ್ತಿನ ಗಾಡಿಯಿತ್ತು. ಹೋಗುತ್ತಿರುವ ಗಾಡಿಗೆ ಹಿಂದಿಂದ ಹಾರಿ ಹತ್ತುವುದು, ಗಾಡಿ ಓಡಿಸಿದ ನೆನಪುಗಳು ಮಸಕು ಮಸಕಾಗಿ ಮನದಾಳದಲ್ಲಿ ಹುದುಗಿವೆ. ಆ ದಿನಗಳಲ್ಲಿ, ಅಜ್ಜನ ಮನೆಯಲ್ಲಿ ನೆಡೆಯುವ ನವರಾತ್ರಿ ಹಬ್ಬಕ್ಕೆ ಬೇರೆಯದೆ ಕಳೆಯಿತ್ತು. ಒಟ್ಟಾರೆ, ವರದಾಮೂಲದಲ್ಲಿ ನವರಾತ್ರಿ ಹಬ್ಬಕ್ಕೆ ಎಷ್ಟೊಂದು ನೆಂಟರಿಷ್ಟರು, ಪ್ರತಿವರ್ಷ ಬೇರೆ ಬೇರೆ ರೀತಿಯ ಮಂಟಪಗಳು, ನವರಾತ್ರಿಯ ಒಂದೊಂದು ರಾತ್ರಿ ನೈವೇದ್ಯಕೆ ಒಂದೊಂದು ಬಗೆಯ ಬಕ್ಷ್ಯಗಳು.. ಈಗಲೂ ಬಾಯಲ್ಲಿ ನೀರೂರುತ್ತದೆ. ಅಜ್ಜನಿಗೆ ಐವರು ಹೆಣ್ಣುಮಕ್ಕಳು, ಒಬ್ಬ ಮಗ. ನನ್ನಮ್ಮ ಮೊದಲ ಮಗಳು. ಮನೆಯಲ್ಲಿ ಬಡತನ ಇದ್ದೆ ಇತ್ತು, ಆದರೂ ಅಜ್ಜ ಶ್ರೀಮಂತಿಕೆಗೆ ಆಸೆ ಪಟ್ಟವರಲ್ಲ.

ಅಜ್ಜನ ಕಾಲಕ್ಕೂ ನಮ್ಮ ಕಾಲಕ್ಕೂ ಇರುವ ವ್ಯತ್ಯಾಸಗಳು ನನ್ನ ಅಜ್ಜನ ಇತ್ತಿಚಿನ [೩-೪ ವರ್ಷಗಳ] ಕೆಲವೊಂದು ಬೇಟಿಯಲ್ಲಿ ಗೊತ್ತಾಗುತ್ತದೆ.

ಅಜ್ಜ: "ಯೆಂತೊ ಅಪಿ! ಹೊಸ ಮೆಟ್ಟು ತಂಗಡಂಗೆ ಕಾಣ್ತು?"
ನಾನು: "ಹೌದ ಅಜ, ಬೇಕಲ, ಆಫೀಸಿಗೆ ಹೊಪ್ಲೆಲ್ಲ"
ಅಜ್ಜ: "ಚಲೊ ಇದ್ದಲ, ಎಷ್ಟು ಮಡ್ಗಿದೆ? 200 ರುಪಾಯಾರು ಆಗಿಕ್ಕು"
ನಾನು: [ಸ್ವಲ್ಪ ಹಿಂದೆಮುಂದೆ ನೊಡುತ್ತ] "ಅದಕ್ಕೂ ಸ್ವಲ್ಪ ಹೆಚ್ಗೆ ಕೊಟಿದ್ನ" [ನಿಜವಾದ ದರ: 2000Rs]
......

ಅಜ್ಜ: "ನಿಂಗೆ ಸಕಾಗ ಅಷ್ಟು ಸಂಬ್ಳ ಬತ್ತನ ಅಪಿ?"
ನಾನು: "ಸಕಾಪ ಅಷ್ಟೆಲ್ಲ ಬತಲ್ಯ ಅಜ, ಆದ್ರೂ ಅಡ್ಡಿಲ್ಲೆ, ತೀರಾ ಕಡ್ಮೆನು ಬತಲೆ.. ಮದ್ಯಕೆ"
ಅಜ್ಜ: "ಹಂಗರೆ ಒಂದೈದು ಸಾವ್ರನಾರು ಬತಲ್ಯನ?"
ನಾನು: "ಐದು ಸಾವ್ರ!! ಅಜ, ಆನು ಸಾಗರದಗಿಲ್ಲೆ, ಬೆಂಗಳೂರಗಿದ್ದಿ, ಅದಕ್ಕಿಂತ 8-9 ಪಟ್ಟು ಹೆಚ್ಗೆ ಬತ್ತ ಮಾರಯ"
[ಪುಣ್ಯ! ಅವತ್ತೆ ಅಜ್ಜನಿಗೆ heart attack ಅಗಲಿಲ್ಲ]
ಅಜ್ಜ: [:O] "ಅಷ್ಟೆಲ್ಲಾ ಕೊಡ್ತ್ವಾ? ಎಂತ ಕೆಲ್ಸ ಮಾಡ್ತ್ಯೊ ನೀನು?"
............

ನನ್ನ ಮೇಲೆ ಸ್ವಲ್ಪ ಬೇಜಾರಿತ್ತು ಅವರಿಗೆ, ಉಪನಯನ ಆದ್ರೂ ಸಂದ್ಯಾವಂದನೆ ಮಂತ್ರ ಬರೊಲ್ಲ, ಪೂಜಾಮಂತ್ರಗಳು ಬರೊಲ್ಲ ಅಂತ. ಈಗ ಅಜ್ಜನಿಗೆ ಸಂಬಂದಪಟ್ಟ ಎಲ್ಲಾ ವಿಚಾರಗಳೂ ಬರಿ ನೆನಪು ಮಾತ್ರ :( ಅವರ ಕಾಲು ಮೆಟ್ಟಿ massage ಮಾಡ್ತಾ ಇದ್ದಿದ್ದು, ಒಲೆ ಮುಂದೆ ಕುತು ಎಣ್ಣೆ ಹಚ್ಚಿ ಕೈ ಒತ್ತಿದ್ದು, ಅವರು ಬೆಳ್ಬೆಳ್ಳಿಗ್ಗೆ ಯೆದ್ದು, ನನ್ನ ಎಬ್ಬಿಸಿ, ದೆವ್ರಿಗೆ ಹೂವು ಕೊಯ್ಲಿಕ್ಕೆ ಕರ್ಕೊಂಡು ಹೊಗ್ತಿದ್ದಿದ್ದು, ದಿನಾ ಸಯಂಕಾಲ ತೀರ್ಥದಲ್ಲಿ ಈಜಾಡಿ, ಸಂದ್ಯಾವಂದನೆ ಮಾಡ್ತಿದ್ದಿದ್ದು, ನವರಾತ್ರೆಯ ಪೂಜೆ, ಎಲ್ಲವು ಬರಿ ನೆನಪು. ಆದರೆ, ಈ ನೆನಪುಗಳು ನನ್ನಲ್ಲಿ ಅಮರವಾಗಿರುತ್ತವೆ.

2 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಚನಾಗ್ ಬರದ್ದೆ. ಅಜ್ಜ ಪದೇ ಪದೇ ನೆನ್ಪಾಗ್ತಿರ್ಲಿ..

ಊರಿಗ್ ಹೋಗವು ಅನ್ಸ್ತಿದ್ದು ನಂಗೆ..

Harisha - ಹರೀಶ ಹೇಳಿದರು...

ಚೆನ್ನಾಗಿದ್ದು... ಅಜ್ಜ ಯಾವಾಗಲೂ ಹಿಂಗೇ ಮನಸಲ್ಲಿ ಉಳೀಲಿ..

ನನ್ನ ಇಬ್ಬರೂ ಅಜ್ಜರನ್ನ ನೋಡ ಭಾಗ್ಯ ನಂಗಿರಲ್ಲೆ :(